ಬೀಡಾಡಿ ಪ್ರಾಣಿಗಳ ಆಶ್ರಯ ತಾಣ ಕೂಡಲೇ ಪ್ರಾರಂಭಿಸಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಡಿ.22: ಬೀದಿ ನಾಯಿಗಳು, ಬೀಡಾಡಿ ದನಗಳ ನಿಯಂತ್ರಣಕ್ಕೆ ಹಾಗೂ ಎಲ್ಲಾ ಪ್ರಾಣಿಗಳ ಜನನ ನಿಯಂತ್ರಣಕ್ಕೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದು, ಅವುಗಳನ್ನು ಕೂಡಲೇ ಅನುಷ್ಠಾನ ಗೊಳಿಸಬೇಕು. ಬೀಡಾಡಿ ಪ್ರಾಣಿಗಳ ಆಶ್ರಯಕ್ಕೆ ಅಗತ್ಯವಿರುವ ಆಶ್ರಯ ತಾಣಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಖಾಸಗಿ, ಸರಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣ, ಬಸ್‌ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶ ಗಳಲ್ಲಿ ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿ, ಅದರ ಪರಿಣಾಮವಾಗಿ ಉಂಟಾಗ ಬಹುದಾದ ಅಪಾಯಗಳನ್ನು ತಡೆಯುವ ಉದ್ದೇಶದಿಂದ ಉಚ್ಛ ನ್ಯಾಯಾಲಯ ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ತಪ್ಪದೇ ಪಾಲಿಸುವ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಈಗಾಗಲೇ ರೈಲ್ವೆ ಹಾಗೂ ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿರುವ ಬೀದಿನಾಯಿಗಳ ಸಂಖ್ಯೆ 4405 ಎಂದು ಗುರುತಿಸಲಾಗಿದೆ. ಪ್ರತಿಯೊಂದು ಸಂಸ್ಥೆಗಳಿಗೂ ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಕೆಲವು ಸಂಸ್ಥೆಗಳು ಇವುಗಳ ನಿಯಂತ್ರಣಕ್ಕೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡದೇ ಇದ್ದಲ್ಲಿ ಕೂಡಲೇ ನೇಮಕ ಮಾಡಬೇಕೆಂದು ತಿಳಿಸಿದರು.
ರೇಬೀಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಅಥವಾ ಆಕ್ರಮಣ ಕಾರಿ ನಡತೆ ಇರುವ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಬಿಡಲು ಅನುಕೂಲವಾಗುವಂತೆ ಪ್ರತೀ ತಾಲೂಕಿನಲ್ಲಿಯೂ ಆಶ್ರಯ ತಾಣಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಾಕಿ ಉಳಿದಿರುವ ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳಲ್ಲಿಯೂ ವಾರದ ಒಳಗೆ ಜಾಗ ಗುರುತಿಸಿ, ಎಸ್‌ಓಪಿ ಅನ್ವಯ ಅಗತ್ಯವಿರುವ ಆಹಾರ, ನೀರು, ನೆರಳು, ಪಶು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವಂತಹ ಆಶ್ರಯ ತಾಣಗಳನ್ನು ನಿರ್ಮಾಣ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಎ.ಬಿ.ಸಿ ನಿಯಮಗಳಡಿ ಕ್ಯಾಪ್ಚರ್- ಸ್ಟೆರಿಲೈಸೇಷನ್ - ವ್ಯಾಕ್ಸಿನೇಷನ್ ಕಾರ್ಯವನ್ನು ನಿರಂತರವಾಗಿ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕು ಎಂದ ಅವರು, ಸಾಧ್ಯವಾದಲ್ಲಿ ನಾಯಿಗಳನ್ನು ಹಿಡಿಯಲು ಪೌರ ಕಾರ್ಮಿಕರು ಮುಂದೆ ಬಂದಲ್ಲಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಬೇಕು ಎಂದರು.
ಆಶ್ರಯ ತಾಣಗಳಲ್ಲಿ ಇರುವ ಬೀಡಾಡಿ ನಾಯಿಗಳ ನಿರ್ವಹಣೆಗೆ ಯಾರಾದರೂ ದಾನಿಗಳು ಮುಂದೆ ಬಂದಲ್ಲಿ ದತ್ತು ಕಾರ್ಯಕ್ರಮದಡಿಯಲ್ಲಿ ಅವರ ಸಹಕಾರ ಪಡೆಯಲು ಮುಂದಾಗಬೇಕು. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಇಲಾಖೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ರೂಪಿಸಬೇಕು ಎಂದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಾಲೂಕುಗಳ ತಹಶೀಲ್ದಾರ್‌ರು, ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.