×
Ad

ಉಡುಪಿ ಜಿಲ್ಲೆಯಾದ್ಯಂತ ಪ್ರವಾಸಿಗರ ದಂಡು!

ಮಲ್ಪೆ ಸಹಿತ ವಿವಿಧ ಬೀಚ್‌ಗಳು, ಶ್ರೀಕೃಷ್ಣ ಮಠದಲ್ಲಿ ಪಾರ್ಕಿಂಗ್ ಸಮಸ್ಯೆ

Update: 2025-12-26 23:04 IST

ಉಡುಪಿ: ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಕಿಕ್ಕಿರಿದು ಹೋಗಿವೆ. ಇದರಿಂದ ಉಡುಪಿ ನಗರ, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ರಸ್ತೆಗಳಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಕಿರಿಕಿರಿ ಎದುರಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ವಾರ್ಷಾಂತ್ಯದ ರಜೆಯಲ್ಲಿ ಉಡುಪಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತಾಧಿಗಳು ಉಡುಪಿಯತ್ತ ಆಗಮಿಸುತ್ತಿದ್ದಾರೆ. ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಳ, ಆನೆಗುಡ್ಡೆ, ಮಂದಾರ್ತಿ ಸೇರಿದಂತೆ ಪ್ರಮುಖ ದೇವಳದಲ್ಲಿ ಭಕ್ತ ಸಾಗರವೇ ತುಂಬಿದೆ.

ಅದೇ ರೀತಿ ಪ್ರವಾಸಿ ತಾಣವಾಗಿರುವ ಮಲ್ಪೆ ಕಡಲ ಕಿನಾರೆ, ಕಾಪು ಬೀಚ್, ಪಡುಬಿದ್ರೆ ಬೀಚ್, ಪಡುಕೆರೆ, ತ್ರಾಸಿಗಳಲ್ಲಿ ಪ್ರವಾಸಿಗರು ತುಂಬಿ ಹೋಗಿದ್ದಾರೆ. ಅಲ್ಲದೆ ಜಿಲ್ಲೆಯ ಬಹುತೇಕ ಲಾಡ್ಜ್‌ಗಳು, ಹೋಮ್‌ಸ್ಟೇ, ರೆಸಾರ್ಟ್‌ಗಳು ಫುಲ್ ಆಗಿದ್ದು, ಬಹಳಷ್ಟು ಬೇಡಿಕೆ ಕೂಡ ಹೆಚ್ಚಾಗಿವೆ. ಇದರ ಪರಿಣಾಮ ಎಲ್ಲ ಕಡೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಗಂಟೆಗಟ್ಟಲೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಮಲ್ಪೆ ಬೀಚ್‌ನಲ್ಲಿ ಕಳೆದ ಕೆಲವು ದಿನಗಳಿಂದ ಜನಸಾಗರವೇ ಹರಿದು ಬರುತ್ತಿವೆ. ಇಂದು ಕೂಡ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿರುವುದು ಕಂಡುಬಂತು.

ಮಲ್ಪೆ ಬೀಚ್, ಸೀವಾಕ್, ಸೈಂಟ್ ಮೇರಿಸ್ ದ್ವೀಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿದರು ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ. ಸೀವಾಕ್ ಬಳಿಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವ ದೊಡ್ಡ ಬೋಟುಗಳು ಸುಮಾರು 20 ಟ್ರಿಪ್‌ಗಳನ್ನು ಮಾಡಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್‌ನಿಂದ ಮಲ್ಪೆ ಬೀಚ್‌ವರೆಗೆ ಎಲ್ಲ ರಸ್ತೆಗಳು ವಾಹನ ದಟ್ಟನೆಯಿಂದ ಟ್ರಾಫಿಕ್ ಸಮಸ್ಯೆಗೆ ತುತ್ತಾದವು.

ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದೆ ಪ್ರವಾಸಿದರು ತೀರಾ ತೊಂದರೆ ಅನುಭವಿಸಿದರು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಪೊಲೀಸರು ಮುತುವರ್ಜಿ ವಹಿಸಿ ಬೀಚ್‌ನಲ್ಲಿ ಹೆಚ್ಚುವರಿಯಾಗಿ ವಾಹನ ನಿಲುಗಡೆಗೆ ಐದು ಜಾಗಗಳನ್ನು ಗುರುತಿಸಿ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಠದ ಪಾರ್ಕಿಂಗ್ ಪ್ರದೇಶ ಫುಲ್!

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಹಿಂಬದಿಯ ಪಾರ್ಕಿಂಗ್ ಪ್ರದೇಶ ಟೂರಿಸ್ಟ್ ವಾಹನಗಳಿಂದ ತುಂಬಿ ಹೋಗಿದ್ದು, ಭಕ್ತಾಧಿಗಳು ತಮ್ಮ ವಾಹನಗಳನ್ನು ಒಳ ರಸ್ತೆಯ ಇಕ್ಕೇಲಗಳಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಅಲ್ಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

ಬಳಿಕ ಪೊಲೀಸರು ಪಾರ್ಕಿಂಗ್ ಪ್ರದೇಶದ ಸಮೀಪ ಇರುವ ಖಾಸಗಿ ಜಾಗದ ಮಾಲಕರೊಂದಿಗೆ ಮಾತುಕತೆ ನಡೆಸಿ, ಅಲ್ಲಿ ವಾಹನ ನಿಲ್ಲಿಸಲು ಅನುವು ಮಾಡಿಕೊಟ್ಟರು. ಇದರಿಂದ ಸಂಜೆ ವೇಳೆ ಮಠದ ಪಾರ್ಕಿಂಗ್ ಪ್ರದೇಶದಲ್ಲಿನ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರ ಕಂಡಿತು.

ಸುಗಮ ಸಂಚಾರಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಕ: ಎಸ್ಪಿ

ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇದರಿಂದ ಕೆಲವು ಕಡೆ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಿದೆ. ಶ್ರೀಕೃಷ್ಣ ಮಠದ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ತುಂಬಿ ಹೋಗಿರುವುದರಿಂದ, ಅಲ್ಲೇ ಇರುವ ಖಾಸಗಿ ಜಾಗ ದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮಲ್ಪೆಯಲ್ಲೂ ಪಾರ್ಕಿಂಗ್ ಸಮಸ್ಯೆ ತಲೆದೋರಿರುವುದರಿಂದ ಹೆಚ್ಚುವರಿ ಯಾಗಿ ಐದು ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕೂಡ ನೇಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಾಳೆ ವಾರಾಂತ್ಯ ಆಗಿರುವುದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದಾರೆ. ಅದಕ್ಕಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಎಲ್ಲ ಕಡೆ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News