ಉಡುಪಿ | ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣ ; ಮಾರಕಾಯುಧ ಪೂರೈಸಿದ ಆರೋಪಿ ಬಂಧನ: ಕಾರು ವಶ
ಸಿಯಾನ್
ಉಡುಪಿ, ಡಿ.15: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಮಾರಕಾಯುಧ ಪೂರೈಕೆ ಮಾಡಿದ ಮತ್ತೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಉಡುಪಿ ಮಿಶನ್ ಕಂಪೌಂಡ್ ಬಳಿ ಶಾಂತಿ ನಗರ ಕ್ರಾಸ್ ನಲ್ಲಿನ ವಸತಿ ಸಮುಚ್ಛಯದ ನಿವಾಸಿ ಮಾಲಿ ಮುಹಮ್ಮದ್ ಸಿಯಾನ್(31) ಬಂಧಿತ ಆರೋಪಿ. ಈತ ಈ ಪ್ರಕರಣದ ಪ್ರಮುಖ ಆರೋಪಿ ಮುಹಮದ್ ಫೈಸಲ್ ಖಾನ್ ನ ಸಂಬಂಧಿ ಎಂದು ತಿಳಿದುಬಂದಿದೆ.
ಸೆ.27ರಂದು ಬೆಳಗ್ಗೆ ಸೈಫ್ ಅನ್ನು ಫೈಜಲ್ ಖಾನ್ ತನ್ನ ಪತ್ನಿ ರಿಧಾ ಶಭನಾ ಕೊಡವೂರು ಮನೆಯಲ್ಲಿ ಕಾಯುತ್ತಿದ್ದಾಳೆ ಎಂದು ಮಣಿಪಾಲದ ಮನೆಯಿಂದ ಕರೆದುಕೊಂಡು ಬಂದಿದ್ದು, ಈ ವೇಳೆ ಶುಕೂರು ಮತ್ತು ಶರೀಫ್, ಕೊಡವೂರು ಮನೆಯ ಶೆಡ್ ನಲ್ಲಿ ಅಡಗಿ ಕುಳಿತಿದ್ದರು. ಬಳಿಕ ಈ ಮೂವರು ಸೇರಿಕೊಂಡು ಸೈಫ್ ಅನ್ನು ಕೊಲೆ ಮಾಡಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರು ಸಹಿತ, ಫೈಜಲ್ ಖಾನ್ ಪತ್ನಿ ರಿದಾ ಶಭನಾಳನ್ನು ಪೊಲೀಸರು ಬಂಧಿಸಿದ್ದರು. ಇವರೆಲ್ಲ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆ ಮಾಡಿದ ದಿನ ಶೆಡ್ ನಲ್ಲಿ ಅಡಗಿ ಕುಳಿತಿದ್ದ ಆರೋಪಿಗಳಿಗೆ ಮುಹಮ್ಮದ್ ಸಿಯಾನ್, ಕಾರಿನಲ್ಲಿ ಮಾರಕಾಯುಧಗಳನ್ನು ತಂದು ನೀಡಿದ್ದನು ಎಂದು ದೂರಲಾಗಿದೆ.
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಸಿಯಾನ್ ಅನ್ನು ಡಿ.15ರಂದು ಬೆಳಗ್ಗೆ ಉಡುಪಿ ಎಂಜಿಎಂ ಕಾಲೇಜು ಬಸ್ ನಿಲ್ದಾಣದ ಬಳಿ ಎಎಸ್ಸೈ ಹರೀಶ್ ಮತ್ತು ಸಿಬ್ಬಂದಿ ಶರಣ ಬಸಪ್ಪ ದಸ್ತಗಿರಿ ಮಾಡಿದ್ದಾರೆ. ಈತನಿಂದ ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೊಬೈಲ್ ಪೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.