×
Ad

ಉಡುಪಿ: ಲಂಚ ಸ್ವೀಕರಿಸಿದ ಆರೋಪ; ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್ ಶಿವಕುಮಾರ್ ಲೋಕಾಯುಕ್ತ ಬಲೆಗೆ

Update: 2026-01-07 20:37 IST

ಉಡುಪಿ, ಜ.7: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಿಡುಗಡೆಯಾದ ಸಬ್ಸಿಡಿ ಹಣಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಉಡುಪಿ ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್ ಶಿವಕುಮಾರ್ ಎಂಬಾತನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮೀನು ವ್ಯಾಪಾರಿ ರಮೇಶ್ ತಿಂಗಳಾಯ ಎಂಬವರು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಸಣ್ಣ ಟೆಂಪೋ ರಿಕ್ಷಾ ಖರೀದಿ ಮಾಡಿದ್ದು, ಈ ಬಗ್ಗೆ 1.20ಲಕ್ಷ ರೂ. ಸಬ್ಸಿಡಿ ಹಣ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಕಮಿಷನ್ ರೂಪದಲ್ಲಿ 10ಸಾವಿರ ರೂ. ನೀಡುವಂತೆ ಬನ್ನಂಜೆಯಲ್ಲಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಸೂಪರ್‌ವೈಸರ್ ಶಿವಕುಮಾರ್ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.

ಅದರಂತೆ ರಮೇಶ್ ತಿಂಗಳಾಯ, 10ಸಾವಿರ ರೂ. ಲಂಚದ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಲಂಚ ನೀಡಲು ಇಷ್ಟ ಇಲ್ಲದ ಕಾರಣ ಅವರು, ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಮಂಗಳೂರು ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಾಜೇಂದ್ರ ನಾಯ್ಕ್ ಎಂ.ಎನ್. ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News