ಉಡುಪಿ| ಮನೆಗೆ ನುಗ್ಗಿ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ, ಆ.27: ಮನೆಗೆ ನುಗ್ಗಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಸುಮಾರು 23 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೆರಂಪಳ್ಳಿ ಚರ್ಚ್ ರಸ್ತೆಯ ಅರುಣ್ ಎಸ್.ವಿ.(43) ಹಾಗೂ ತೆಂಕನಿಡಿಯೂರು ಗ್ರಾಮದ ಗರಡಿಮಜಲು ನಿವಾಸಿ ಕೌಶೀಕ್(19) ಬಂಧಿತ ಆರೋಪಿಗಳು.
ಬಂಧಿತರಿಂದ 2 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 2,86,730 ರೂ. ಮೌಲ್ಯದ 1.360 ಕೆಜಿ ಬೆಳ್ಳಿ ಆಭರಣಗಳು, 22500 ರೂ. ಮೌಲ್ಯದ 1.45ಗ್ರಾಂ ಚಿನ್ನದ ನಾಣ್ಯಗಳು, 4 ಲಕ್ಷ ರೂ. ಮೌಲ್ಯದ ಒಂದು ಆಟೋರಿಕ್ಷಾ, 33,000 ರೂ. ನಗದು, 13 ಸಾವಿರ ರೂ. ಮೌಲ್ಯದ 2 ಮೊಬೈಲ್, 45ಸಾವಿರ ರೂ. ಮೌಲ್ಯದ ಬೈಕ್, 30ಸಾವಿರ ರೂ. ಮೌಲ್ಯದ ವಿದೇಶಿ ವಾಚ್, 13,26,000 ರೂ. ಮೌಲ್ಯದ 88.400ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರಿಂದ ಒಟ್ಟು ಐದು ಪ್ರಕರಣಗಳ ಒಟ್ಟು 23,56,230 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲು-ತನಿಖೆ: ಪುತ್ತೂರು ಗ್ರಾಮದ ವಾಸುಕೀ ನಗರದ ಸನಂ ಎಂಬವರ ಮನೆಗೆ ಆ.8ರಿಂದ ಆ.11ರ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು, ಕೋಣೆಯ ಕಪಾಟಿನನಲ್ಲಿದ್ದ ವಿದೇಶಿ ನೋಟುಗಳು ಸಹಿತ ಒಟ್ಟು 2,14,000 ರೂ. ಮೌಲ್ಯದ ನೋಟುಗಳು ಕಳವು ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆ.23ರಂದು ಖಚಿತ ಮಾಹಿತಿಯ ಮೇರೆಗೆ ಪ್ರಕರಣದ ಆರೋಪಿಗಳಾದ ಅರುಣ್ ಎಸ್.ವಿ. ಹಾಗೂ ಕೌಶೀಕ್‌ನನ್ನು ಪೆರಂಪಳ್ಳಿ ಸಂತೋಷ ನಗರದಲ್ಲಿ ಬಂಧಿಸಿದರು. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿ ಅರುಣ್ ಆಚಾರಿ ಮಣಿಪಾಲ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣದಲ್ಲಿ 9 ವರ್ಷ ಕಾರಗೃಹ ಶಿಕ್ಷೆ ಅನುಭ ವಿಸಿ 2025ರ ಜುಲೈ ತಿಂಗಳಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್‌ನಿಂದ ಬಿಡುಗಡೆಯಾಗಿ ಬಂದಿದ್ದಾನೆ.
ಹಲವು ಪ್ರಕರಣಗಳಲ್ಲಿ ಭಾಗಿ: ಬಂಧಿತ ಆರೋಪಿಗಳು ವಿಚಾರಣೆಗೆ ಒಳಪಡಿಸಿದಾಗ ಇವರು 5 ಪ್ರಕರಣದಲ್ಲಿ ಭಾಗಿ ಯಾಗಿರುವುದು ಬೆಳಕಿಗೆ ಬಂತು. ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿದ ಬೈಕ್‌ನಲ್ಲಿ ಹೋಗಿ ಕಳ್ಳತನ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಹೀಗೆ ಇವರು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ಕೊಡಂಕೂರು ಗ್ರಾಮದ ಮನೆಯಲ್ಲಿ ಕಳವು ಪ್ರಕರಣ, ಜು.10ರಂದು ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಮಸೀದಿ ಹತ್ತಿರವಿರುವ ಗ್ಯಾರೇಜ್‌ನಲ್ಲಿಟ್ಟಿದ್ದ ಬೈಕ್ ಕಳ್ಳತನ ಪ್ರಕರಣ, ಜು.17ರಂದು ಮಲ್ಪೆ ಠಾಣಾ ವ್ಯಾಪ್ತಿಯ ಕೆಳಾರ್ಕಳ ಬೆಟ್ಟುವಿನಲ್ಲಿ ಮನೆ ಕಳ್ಳತನ ಪ್ರಕರಣ, ಜು.14ರಂದು ಮಲ್ಪೆ ಠಾಣಾ ವ್ಯಾಪ್ತಿಯ ಕೆಳಾರ್ಕಳಬೆಟ್ಟುವಿನಲ್ಲಿ ರವಿ ಉಪಾಧ್ಯ ಎಂಬವರ ಮನೆಯಲ್ಲಿ ಕಳ್ಳತನ ಮಾಡಿರುವುದು ವರದಿಯಾಗಿದೆ.
ಉಡುಪಿ ಎಸ್ಪಿ ಹರಿರಾಮ್ ಶಂಕರ್ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ, ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಉಡುಪಿ ನಗರ ಪೊಲೀಸ್ ಠಾಣಾ ಎಸ್ಸೈ ಪ್ರಕಾಶ್, ಸಿಬ್ಬಂದಿ ಪ್ರಸನ್ನ ಸಿ., ಜೀವನ್ ಕುಮಾರ್, ಕೃಷ್ಣ ದೇವಾಡಿಗ, ಆನಂದ ಗಾಣಿಗ, ಆನಂದ ಎಸ್., ಓಬಳೇಶ್, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್ ಕುಮಾರ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.