Udupi | ಮಲ್ಪೆ ಕಡಲತೀರದಲ್ಲಿ ’ಅಕ್ಕ ಕೆಫೆ’ ಲೋಕಾರ್ಪಣೆ
ಉಡುಪಿ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ ’ಅಕ್ಕ ಕೆಫೆ’ಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಕ್ಕ ಕೆಫೆ ಕೇವಲ ಒಂದು ಉಪಹಾರ ಮಂದಿರವಲ್ಲ, ಇದು ಮಹಿಳೆಯರ ಶ್ರಮ ಮತ್ತು ಸ್ವಾಭಿಮಾನದ ಸಂಕೇತ, ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನಿ ಯೋಜನೆಯಡಿ ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಈ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ವಿಶೇಷ ’ಅಕ್ಕ ಕೆಫೆ’ಯನ್ನು ಕಲ್ಯಾಣಪುರದ ’ನಿಧಿ ಸಂಜೀವಿನಿ ಸ್ವಸಹಾಯ ಸಂಘ’ ನಿರ್ವಹಿಸುತ್ತಿದೆ. ಮಹಿಳೆಯರೇ ಸ್ವತಃ ಈ ಕೆಫೆಯ ಸಂಪೂರ್ಣ ಉಸ್ತುವಾರಿ ಹೊತ್ತುಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಸಿಇಓ ಪ್ರತೀಕ್ ಭಾಯಲ್, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಕೃಷಿ ವ್ಯವಸ್ಥಾಪಕಿ ಸೌಮ್ಯ ಜಿಲ್ಲಾ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.