ವಿಕಲಚೇತನ ಮಕ್ಕಳಿಗೆ ‘ವಿಶಿಷ್ಟ ಸಾಮರ್ಥ್ಯ ವನ ಪಾರ್ಕ್’ಗೆ ಶಿಲಾನ್ಯಾಸ
ಉಡುಪಿ, ಮೇ 16: ವಿಕಲಚೇತನ ಮಕ್ಕಳ ಬೆಳವಣಿಗೆ, ಮನರಂಜನೆ ಹಾಗೂ ಅವರ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉಡುಪಿ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ ‘ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯ ವನ ಪಾರ್ಕ್’ ನಿರ್ಮಾಣ ಮಾಡಲಾಗುತ್ತಿದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಪಂ ವತಿಯಿಂದ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ವಿಕಲಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗಾವಕಾಶ ಮತ್ತು ಸ್ವತಂತ್ರ ಜೀವನಕ್ಕೆ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಜಿಪಂ ಸಿಇಓ ಅಧ್ಯಕ್ಷತೆಯಲ್ಲಿ ಇತರ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಾಮರ್ಥ್ಯ ಟ್ರಸ್ಟ್ ರಚಿಸಲಾಗಿದೆ. ಒಂದೂವರೆ ಕೋಟಿ ಸರ್ಕಾರಿ ಅನುದಾನ ಮತ್ತು ಇತರ ಸಂಘ- ಸಂಸ್ಥೆಗಳ ನೆರವಿನಲ್ಲಿ ಒಟ್ಟು 4.90 ಕೋಟಿ ವೆಚ್ಚದಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣವಾಗಲಿದೆ.
ಉಡುಪಿ ಜಿಲ್ಲೆಯಲ್ಲಿ 15 ವರ್ಷ ಒಳಗಿನ 1228 ವಿಕಲಚೇತನ ಮಕ್ಕಳಿದ್ದು ಇವರು ತಮ್ಮ ಕುಟುಂಬ ಸದಸ್ಯ ರೊಂದಿಗೆ ಕಾಲ ಕಳೆಯಲು ಪಾರ್ಕ್ ಅನುಕೂಲವಾಗಲಿದೆ. ಇದಲ್ಲದೆ, ಇದರಲ್ಲಿ ಥೆರಪಿ ಸ್ವಿಂಗ್ಸ್ ಗಳು, ಬ್ಯಾಲನ್ಸ್ ಬೀಮ್ಸ್‌ಗಳು, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯ ಗಳು ಇರಲಿದೆ. ಹೂಗಳ ಸುವಾಸನೆ ವೈವಿಧ್ಯ ಅರಿಯಲು ಸೆನ್ಸೇಶನ್ ಸೆನ್ಸರಿ ಪಾರ್ಕ್ ಕೂಡ ಬರಲಿದೆ.
ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ಇಡೀ ರಾಜ್ಯ, ದೇಶಕ್ಕೆ ಮಾದರಿ ಆಗಬಲ್ಲ ಪಾರ್ಕ್ ಆಗಲಿದೆ. ಇದನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಆದರೆ ಎರಡೇ ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವಂತಾಗಬೇಕು. ನಮ್ಮ ಇಲಾಖೆಯಿಂದಲೂ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಇಲಾಖೆಯ ರುದ್ರಣ್ಣ, ರತ್ನ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಜೈವಿಠ್ಠಲ್, ಹರಿಪ್ರಸಾದ ರೈ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.