×
Ad

ಉಡುಪಿ| ಅಂತರಾಜ್ಯ ಕಳವು ಆರೋಪಿ ಉಮೇಶ್ ಬಳೆಗಾರ ಬಂಧನ

Update: 2026-01-02 21:39 IST

ಉಡುಪಿ, ಜ.2: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳವು ಆರೋಪಿಯೊಬ್ಬನನ್ನು ಕಾಪು ಪೊಲೀಸರು ಜ.2ರಂದು ಬಂಧಿಸಿದ್ದಾರೆ.

ಮಲ್ಲಾರು ಗ್ರಾಮದ ಫಕೀರ್ಣಕಟ್ಟೆಯ ಮೂಲದ ಪ್ರಸ್ತುತ ತಮಿಳುನಾಡು ಕನ್ಯಾಕುಮಾರಿಯ ಉಮೇಶ್ ಬಳೆಗಾರ ಯಾನೆ ಉಮೇಶ್ ಪಿ ಯಾನೆ ಉಮೇಶ್ ರೆಡ್ಡಿ(47) ಬಂಧಿತ ಆರೋಪಿ.

ಡಿ.4ರಂದು ಕಾಪು ಮಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬವರ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಒಟ್ಟು 3,90,000ರೂ. ಮೌಲ್ಯದ ಸುಮಾರು 72 ಗ್ರಾಂ ತೂಕದ ಚಿನ್ನಾಭರಣ ಹಾಗೂ 1,500ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಉಮೇಶ್ ಬಳೆಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈತನ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸುಮಾರು 8 ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯಾಗಿದೆ.

ಈತನ ವಿರುದ್ಧ ಕೇರಳ ರಾಜ್ಯದ ತನ್ನಿಪಲಂ, ಮಾವೂರು, ತ್ರಿಶೂರ್ ಹಾಗೂ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿಶಿರ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ, ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ರಹಿತ ದಸ್ತಗಿರಿ ವಾರಂಟ್ ಹೊರಡಿಸಿವೆ.

ಅಲ್ಲದೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಈತ ದಸ್ತಗಿರಿಗೆ ಸಿಗದೇ ಇದ್ದುದರಿಂದ ಎಲ್.ಪಿ.ಸಿ ವಾರಂಟ್ ಕೂಡ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವು ಪ್ರೊಮೇಶನ್ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಎಸ್ಸೈ ಅನಿಲ್ ಕುಮಾರ್ ಟಿ. ನಾಯ್ಕ, ಕಾಪು ಎಸ್ಸೈ ಶುಭಕರ ಮತ್ತು ಸಿಬ್ಬಂದಿ ರಾಜೇಶ್, ಮೋಹನಚಂದ್ರ, ರಘು, ಜೀವನ್, ಜೀಪು ಚಾಲಕರಾದ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಭಾಗವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News