×
Ad

ಉಡುಪಿ ಜುವ್ಯೆಲ್ಲರಿ ವರ್ಕ್‌ಶಾಪ್ ಕಳ್ಳತನ ಪ್ರಕರಣ: ಐವರು ಆರೋಪಿಗಳ ಬಂಧನ

87.48 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2025-09-20 13:53 IST

ಬಂಧಿತ ಆರೋಪಿಗಳು

ಉಡುಪಿ: ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನ ಮಾರುತಿ ವೀಥಿಕಾ ಬಳಿ ಜುವ್ಯೆಲ್ಲರಿ ವರ್ಕ್‌ಶಾಪ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಮಲ್ಶಿರೋಸ್ ತಾಲೂಕಿನ ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ(23), ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್ ಶ್ರೀಮಂತ್(25) ಬಂಧಿತ ಆರೋಪಿಗಳು.

ಬಂಧಿತರಿಂದ 74,88,000ರೂ. ಮೌಲ್ಯದ 748.8 ಗ್ರಾಂ ಚಿನ್ನ, 3,60,000 ರೂ. ಮೌಲ್ಯದ 4 ಕೆಜಿ 445 ಗ್ರಾಂ ಬೆಳ್ಳಿ, 5,00,000ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 87,48,000ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಕುಮಟೆ ಮೂಲದ, ಪ್ರಸ್ತುತ ನಗರದ ಅಪಾರ್ಟ್‌ಮೆಂಟ್ ನಿವಾಸಿ ವೈಭವ್ ಮೋಹನ ಘಾಟಗೆ ಎಂಬವರಿಗೆ ಸೇರಿದ ಮಾರುತಿ ವೀಥಿಕಾ ಬಳಿಯ ಉಪೇಂದ್ರ ಎಂಬ ಕಟ್ಟಡದ ನೆಲಮಹಡಿಯಲ್ಲಿರುವ ವೈಭವ ಗೋಲ್ಡ್ ಆ್ಯಂಡ್ ಸಿಲ್ವರ್ ಮೆಲ್ಟಿಂಗ್ ಮತ್ತು ರಿಫೈನರಿ ಅಂಗಡಿಗೆ ಸೆ.8ರಂದು ರಾತ್ರಿ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು, ರಿಫೈನರಿ ಮಷಿನ್‌ನಲ್ಲಿಟ್ಟಿದ್ದ 95,71,000ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ತಂಡ, ಆರೋಪಿಗಳನ್ನು ಸೆ.12ರಂದು ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಮಲ್ಶಿರೋಸ್ ತಾಲೂಕಿನ ನಿಮ್ಗಾಂವ್ ಎಂಬಲ್ಲಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಎಸ್ಸೈ ಭರತೇಶ ಕಂಕಣವಾಡಿ, ಕಾಪು ಎಸ್ಸೈ ತೇಜಸ್ವಿ ಟಿ.ಐ., ಕೊಲ್ಲೂರು ಎಸ್ಸೈ ವಿನಯಕುಮಾರ್ ಕೆ., ಎಎಸ್ಸೈ ಹರೀಶ್, ಸಿಬ್ಬಂದಿ ಜೀವನ್ ಕುಮಾರ್, ಪ್ರಸನ್ನ ಕುಮಾರ್, ಸಂತೋಷ್ ಶೆಟ್ಟಿ, ಸಂತೋಷ್ ರಾಥೋಡ್, ಶಿವಕುಮಾರ್, ಹೇಮಂತ್ ಕುಮಾರ್, ಸುನೀಲ್ ರಾಥೋಡ್, ಮಣಿಪಾಲ್ ಠಾಣೆಯ ರವಿರಾಜ್, ಕೊಲ್ಲೂರು ಠಾಣೆಯ ನಾಗೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯದ ಅಕ್ಲುಜ್ ಪೋಲೀಸ್ ಠಾಣಾ ಸಿಬ್ಬಂದಿ ಎಸ್.ಆರ್.ಮಾದುಬಾವಿ, ವಿ.ಬಿ.ಘಾಟಗೆ, ವಿ.ಎ. ಸಾಟೆ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News