ಉಡುಪಿ: ಮನೆಬಿಟ್ಟು ಬಂದ ಹಳೆಬೀಡಿನ ಬಾಲಕಿಯ ರಕ್ಷಣೆ
ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ, ಆದಿಉಡುಪಿಯ ಪ್ರೇಮ ರಾಮಚಂದ್ರ ಎಂಬವರಿಗೆ ಬಾಲಕಿ ಕಂಡು ಬಂದಿದ್ದು, ಆಕೆಯ ಚಲನ ವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬಾಲಕಿ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ.
ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದು, ಒಳಕಾಡು ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಯನ್ನು ರಕ್ಷಿಸಿ, ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ಈ ಕಾರ್ಯಾಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಸಹಕರಿಸಿದರು.
ಬಾಲಕಿ ನಾಪತ್ತೆಯಾದ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇಬೀಡು ಪೋಲಿಸರು ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದು ಬಾಲಕಿಯ ತಾಯಿಯೊಂದಿಗೆ ಬಂದಿದ್ದಾರೆ. ಅದರಂತೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಬಾಲಕಿಯನ್ನು ಹಳೇಬೀಡಿನ ಪೋಲಿಸರಿಗೆ ಒಪ್ಪಿಸಿದರು. ತಾಯಿಯೊಂದಿಗೆ ತೆರಳಲು ಒಪ್ಪದ ಕಾರಣದಿಂದ ಬಾಲಕಿಗೆ ಚಿಕ್ಕಮಗಳೂರು ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರಿದಿದೆ.