×
Ad

ಉಡುಪಿ | ಸ್ವಾತಂತ್ರ್ಯ ಸಿಕ್ಕಿದ ಏಳು ದಶಕಗಳ ಬಳಿಕವೂ ‘ಕೆಂಪು ಪಟ್ಟಿ’ ಜೀವಂತ : ಡಾ.ರವೀಂದ್ರನಾಥ ಶ್ಯಾನುಭಾಗ್

► "ಮೇಲಾಧಿಕಾರಿ, ಮೇಲ್ಮನವಿ ಪ್ರಾಧಿಕಾರ ಆದೇಶವನ್ನು ಧಿಕ್ಕರಿಸಿದ ಗ್ರಾಪಂ" ► "ನಾಲ್ಕು ವರ್ಷಗಳಿಂದ 9/11 ದಾಖಲೆ ನೀಡದೆ ಸತಾಯಿಸುತ್ತಿರುವ ಉದ್ಯಾವರ ಗ್ರಾಪಂ"

Update: 2025-12-15 21:00 IST

ಉಡುಪಿ, ಡಿ.15: ಬ್ರಿಟಿಷರ ಕಾಲದ ‘ರೆಡ್ ಟೇಪಿಸಂ’ ಅಥವಾ ‘ಬಾಬು ಸಂಸ್ಕೃತಿ’ ಸ್ವಾತಂತ್ರ್ಯ ದೊರೆತ ಏಳು ದಶಕಗಳ ಬಳಿಕ ಈಗಲೂ ಉದ್ಯಾವರ ಗ್ರಾಮಪಂಚಾಯತ್ನಲ್ಲಿ ಜೀವಂತವಾಗಿದ್ದು, ಮನೆ ಕಟ್ಟಲು ಅಗತ್ಯವಿರುವ ತನ್ನ ನಿವೇಶನದ ದಾಖಲೆಯೊಂದನ್ನು (9/11) ಪಡೆಯಲು ಗ್ರಾಮದ ನಾಗರಿಕರೊಬ್ಬರು ನಾಲ್ಕು ವರ್ಷಗಳಿಂದ ಪ್ರಯತ್ನಿಸಿ ಸೋತು ಸುಣ್ಣವಾಗಿದ್ದಾರೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ದೂರಿದ್ದಾರೆ.

ತಮ್ಮ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಡಾ.ಶ್ಯಾನುಭಾಗ್ ಈ ವಿಷಯ ತಿಳಿಸಿದರು. ಈ ಪ್ರಕರಣದ ಮತ್ತೊಂದು ವಿವಾದಾತ್ಮಕ ಅಂಶವೆಂದರೆ ಜಿಲ್ಲಾ ಪಂಚಾಯತ್ n ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ಸೇರಿದಂತೆ ಮೇಲಾಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರ ನೀಡಿದ ಎಲ್ಲಾ ಆದೇಶ ಮತ್ತು ಸೂಚನೆಗಳನ್ನು ಗ್ರಾಮ ಪಂಚಾಯತ್ ಹಾಗೂ ಪಿಡಿಓ ತಿರಸ್ಕರಿಸಿ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು. ಇದು ನಮ್ಮ ಆಡಳಿತ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ ಎಂದವರು ಹೇಳಿದರು.

ಉದ್ಯಾವರ ಗ್ರಾಪಂ ವ್ಯಾಪ್ತಿಯ ಕಂಪನಬೆಟ್ಟು ನಿವಾಸಿ ವಿಮಾ ಉದ್ಯೋಗ ದಲ್ಲಿ ತೊಡಗಿಸಿಕೊಂಡಿರುವ ವಸಂತ ಜಿ.ಶೇರಿಗಾರ್ ಅವರು ತಮಗೆ ಪಿತ್ರಾರ್ಜಿ ಆಸ್ತಿಯಲ್ಲಿ ತಮಗೆ ಬಂದ 9 ಸೆನ್ಸ್ ಜಾಗದಲ್ಲಿ ಮನೆ ಕಟ್ಟಲು ನಿಯಮ ಪ್ರಕಾರ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಮಾಡಿಸಿದ್ದರು. ಬಳಿಕ 2021ನೇ ಜುಲೈ ತಿಂಗಳಲ್ಲಿ ಉಡುಪಿ ನಗರ ಪ್ರಾಧಿಕಾರದಿಂದ ಏಕವಿನ್ಯಾಸದ ಅನುಮೋದನೆಯನ್ನೂ ಪಡೆದರು. ಇದರ ನಂತರ ಅವರು 9/11 ಪ್ರಮಾಣಪತ್ರಕ್ಕಾಗಿ ಗ್ರಾಪಂಗೆ ಅರ್ಜಿಯನ್ನೂ ಸಲ್ಲಿಸಿದರು ಎಂದು ಡಾ.ಶ್ಯಾನುಭಾಗ್ ವಿವರಿಸಿದರು.

2021ರ ಜು.29ರ ಉದ್ಯಾವರ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಈ ದಾಖಲೆ ನೀಡುವಂತೆ ನಿರ್ಣಯಿಸಲಾಯಿತು. ತಿಂಗಳೆರಡು ಕಳೆದರೂ ಗ್ರಾಪಂ ಅವರಿಗೆ ದಾಖಲೆ ನೀಡಲಿಲ್ಲ. ಎರಡು ತಿಂಗಳ ಬಳಿಕ (ಸೆ.27) ಹಿಂಬರಹವೊಂದನ್ನು ನೀಡಿದ ಪಿಡಿಓ, ಸಾರ್ವಜನಿಕ ರಸ್ತೆಗಾಗಿ ಅಗತ್ಯವಿರುವ 10 ಅಡಿ ಅಗಲದ ಜಮೀನನ್ನು ದಾನಪತ್ರದ ಮೂಲಕ ಬಿಟ್ಟ ನಂತರ 9/11 ನೀಡುವುದಾಗಿ ತಿಳಿಸಿದರು.

ಆದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಏಕವಿನ್ಯಾಸ ಅನುಮೋದನೆಯಲ್ಲಿ 10 ಅಡಿ ಅಗಲದ ರಸ್ತೆಯ ಪ್ರಸ್ತಾವನೆ ಅಥವಾ ಶರತ್ತು ಇದ್ದಿರಲಿಲ್ಲ. ಹೀಗಾಗಿ ತನಗೆ ದಾಖಲೆ ನೀಡುವಂತೆ ವಸಂತ ಶೇರಿಗಾರ್ ವಿನಂತಿಸಿದರು. ಇದಕ್ಕೆ ಪ್ರತಿಯಾಗಿ ಪ್ರಾಧಿಕಾರಕ್ಕೆ ಪತ್ರ ಬರೆದ ಪಿಡಿಓ, ಮುಂದೆ ರಚಿಸುವ ಯಾವುದೇ ರಸ್ತೆ ವಸಂತ ಅವರ ನಿವೇಶನದ ಮೇಲೆ ಹಾದು ಹೋಗುವುದೋ ಎಂದು ಸ್ಪಷ್ಟೀಕರಣ ಕೇಳಿದರು ಎಂದು ಡಾ.ಶ್ಯಾನುಭಾಗ್ ಹೇಳಿದರು.

ಈ ಪತ್ರಕ್ಕೆ ಉತ್ತರಿಸಿದ ಪ್ರಾಧಿಕಾರ, ವಸಂತ ಶೇರಿಗಾರ್ ಜಮೀನಿನಲ್ಲಿ ಯಾವುದೇ ರಸ್ತೆ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟ ಪಡಿಸಿತು. ಈ ನಡುವೆ ಇದಕ್ಕೆ ಯಾವುದೇ ಸಂಬಂಧವೇ ಇಲ್ಲದ ಪದ್ಮಾವತಿ ಎಂಬವರು ನೀಡಿದ ‘ದೂರನ್ನು’ ಆಧರಿಸಿ ಪಿಡಿಓ ಏಕವಿನ್ಯಾಸಕ್ಕೆ ತಡೆಯನ್ನು ತಂದರು. 2023ರ ಮಾ.28ರಂದು ನಗರಾಭಿವೃದ್ಧಿ ಪ್ರಾಧಿಕಾರ ಏಕವಿನ್ಯಾಸದ ತಡೆಯನ್ನು ತೆರವುಗೊಳಿಸಿತು. ಇದರ ಆಧಾರದಲ್ಲಿ ವಸಂತರಿಗೆ ಗ್ರಾಪಂನಿಂದ 9/11 ಪ್ರಮಾಣ ಪತ್ರ ಹಾಗೂ ಪ್ರಾಧಿಕಾರದ ಪ್ರಾರಂಭಿಕ ಪ್ರಮಾಣ ಪತ್ರ ದೊರಕಿತು.

ಇದರ ನಂತರ ವಸಂತ ಶೇರಿಗಾರ್ ಕಟ್ಟಡ ಪರವಾನಿಗೆಗೆ ಅರ್ಜಿ ಸಲ್ಲಿಸಿ ಇಂದಿಗೆ 25 ತಿಂಗಳು ಕಳೆದರೂ ಪಂಚಾಯತ್ ಇನ್ನೂ ಅವರಿಗೆ ಪರವಾನಿಗೆ ನೀಡಿಲ್ಲ. ಸರಕಾರಿ ನಿಯಮದಂತೆ 60 ದಿನಗಳಲ್ಲಿ ಈ ಪರವಾನಿಗೆ ನೀಡಬೇಕಿದೆ ಎಂದವರು ಹೇಳಿದರು. ಈ ನಡುವೆ ಶೇರಿಗಾರರು ಸಾಲ ಮಾಡಿ ಮನೆ ನಿರ್ಮಾಣ ಪ್ರಾರಂಭಿಸಿದ್ದರು. ಬಳಿಕ ಮನೆಗೆ ಡೋರ್ ನಂಬರ್ ಪಡೆಯಲು ಅರ್ಜಿ ಸಲ್ಲಿಸಿದಾಗ, ಗ್ರಾಪಂ ವಸಂತರಿಗೆ ತಾನೇ ನೀಡಿದ 9/11 ಪ್ರಮಾಣ ಪತ್ರವನ್ನು ಅವರಿಗೆ ಯಾವುದೇ ಮಾಹಿತಿ ನೀಡದೇ, ಮೇಲಾಧಿಕಾರಿಗಳಿಂದ ಒಪ್ಪಿಗೆಯನ್ನು ಪಡೆಯದೇ 2024ರ ಫೆ.15ರಂದು ಪಿಡಿಓ ಅವರು ಏಕಪಕ್ಷೀಯವಾಗಿ ರದ್ದು ಪಡಿಸಿದ ಆಘಾತಕಾರಿ ಮಾಹಿತಿ ಹೊರಬಿತ್ತು. ಆಗ ವಸಂತ ಶೇರಿಗಾರರು ಪ್ರತಿಷ್ಠಾನಕೆಕ ದೂರು ಸಲ್ಲಿಸಿದರು ಎಂದರು.

ತನಿಖೆ ನಡೆಸಿದಾಗ ಪ್ರತಿಷ್ಠಾನ ಕಂಡುಕೊಂಡ ಅಂಶವೆಂದರೆ ಪಂಚಾಯತ್ ನಿಂದ ಶೇರಿಗಾರ್ಗೆ ಬೇಕಿರುವುದು 9/11 ಪ್ರಮಾಣ ಪತ್ರ ಮತ್ತು ಡೋರ್ ನಂಬರ್. ಇದನ್ನು ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ನೀಡಬೇಕು. ಆದರೆ ಅರ್ಜಿ ಸಲ್ಲಿಸಿದ 24 ತಿಂಗಳು ಕಳೆದರೂ ಅವರಿಗೆ ಡೋರ್ ನಂಬರ್ ನೀಡಿಲ್ಲ ಎಂದು ಶ್ಯಾನುಭಾಗ್ ವಿವರಿಸಿದರು.

ತನ್ನ ದಾಖಲೆಗಳನ್ನು ಪಡೆಯಲು ಶೇರಿಗಾರ್ 23 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಶೇರಿಗಾರ್ಗೆ ಮನೆ ಕಟ್ಟಲು ಅಗತ್ಯವಿರುವ ದಾಖಲೆ ನೀಡುವಂತೆ ಮೇಲ್ಮನವಿ ಸಕ್ಷಮ ಪ್ರಾಧಿಕಾರ (ಉಡುಪಿ ತಾಪಂ) ತೀರ್ಪು ನೀಡಿದ್ದು, 8 ಬಾರಿ ಪಂಚಾಯತ್ ಅಧಿಕಾರಿಗೆ ಆದೇಶ ನೀಡಿದ್ದರೂ ಅದರ ಪಾಲನೆಯಾಗಿಲ್ಲ ಎಂದರು.

ಬಳಿಕ ಜಿಪಂನ ಸಿಇಓ ಪ್ರತೀಕ್ ಬಾಯಲ್ ಅವರಿಗೆ ದೂರು ನೀಡಿದ್ದು, ಅವರು ದಾಖಲೆಗಳನ್ನು ನೀಡುವಂತೆ ಸ್ಪಷ್ಟ ಆದೇಶ ನೀಡಿ, ಕರ್ತವ್ಯಲೋಪದ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿ (ಸೆ.1) ಮೂರು ತಿಂಗಳು ಕಳೆದರೂ ಇನ್ನೂ ಅದು ಅನುಷ್ಠಾನಗೊಂಡಿಲ್ಲ ಎಂದರು.

ಗ್ರಾಪಂನಿಂದ ನಾಗರಿಕರೊಬ್ಬರಿಗೆ ಆಗಿರುವ ಅನ್ಯಾಯದ ವಿರುದ್ಧ ಇನ್ನುಳಿದಿರುವುದು ಹೈಕೋರ್ಟ್ ನಲ್ಲಿ ದಾವೆ ಹೂಡುವುದು ಮಾತ್ರ. ಇದಕ್ಕೆ ಪ್ರತಿಷ್ಠಾನ ಶೇರಿಗಾರ್ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.


ಪಂಚಾಯತ್ ರಾಜ್ ವ್ಯವಸ್ಥೆಗೆ ಅಪಾಯಕಾರಿ :

ಉದ್ಯಾವರ ಪಂಚಾಯತ್ ಈ ಕ್ರಮ, ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಕಳಂಕ. ಅಧಿಕಾರ ವಿಕೇಂದ್ರಿಕರಣ, ಜನತಾಂತ್ರಿಕ ಭಾಗವಹಿಸುವಿಕೆ ಹಾಗೂ ಗ್ರಾಮ ಮಟ್ಟದಲ್ಲೇ ಅಭಿವೃಧ್ಧಿ ಸಂಬಂಧಿತ ನಿರ್ಧಾರಕ್ಕಾಗಿ ಗ್ರಾಪಂಗೆ ನೀಡಿದ ಅಧಿಕಾರ ಇಲ್ಲಿ ದುರುಪಯೋಗವಾಗಿದೆ.

ಗ್ರಾಪಂ, ತಾಪಂ ಹಾಗೂ ಜಿಪಂ ಮೂರು ಹಂತಗಳಲ್ಲೂ ಸಕ್ಷಮ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, ಕಾಲಕ್ರಮೇಣ ರಾಜಕೀಯ ಹಸ್ತಕ್ಷೇಪ ಹಾಗೂ ಸರಕಾರಿ ನೌಕರರ ‘ಬಾಬು ಸಂಸ್ಕೃತಿ’ಯ ಕಪಿಮುಷ್ಟಿಯಿಂದ ಅವುಗಳ ಪರಿಣಾಮ ಕುಗ್ಗಿದೆ. ಗ್ರಾಪಂನ ನಾಗರಿಕರೊಬ್ಬರು 9/11 ಪ್ರಮಾಣ ಪತ್ರ ದಾಖಲೆಗೆ ನಡೆಸಿದ ಹೋರಾಟ ಇದಕ್ಕೆ ಸ್ಪಷ್ಟ ಉದಾಹರಣೆ.

ಭ್ರಷ್ಟಾಚಾರ, ಅಧಿಕಾರದ ದುರುಪಯೋಗ, ಈಗಾಗಲೇ ನೀಡಿದ ದಾಖಲೆಗಳನ್ನು ಅಕಾರಣ ರದ್ದು, ಮೇಲಾಧಿಕಾರಿಗಳ ಆದೇಶಗಳ ನಿರ್ಲಕ್ಷ್ಯ ಪಂಚಾಯತ್ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ನುಡಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News