ಉಡುಪಿ | ರಕ್ಷಿಸಲ್ಪಟ್ಟ ರಕ್ಷಣಾ ಇಲಾಖೆ ಸಿಬ್ಬಂದಿ ಸಂಬಂಧಿಕರ ವಶಕ್ಕೆ
ಉಡುಪಿ, ಡಿ.13: ರೈಲಿನಲ್ಲಿ ತಲೆಗೆ ತಾಗಿ ಗಾಯಗೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ವಿಶು ಶೆಟ್ಟಿ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ ಕೊಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ರಕ್ಷಣಾ ಇಲಾಖೆಯ ಸಿಬ್ಬಂದಿ ಹೊರ ರಾಜ್ಯದ ವಿಜಯ್(38) ಎಂಬವರು ರಜೆಯಲ್ಲಿ ಊರಿಗೆ ತೆರಳುವಾಗ ಅಕಸ್ಮಾತ್ ರೈಲಿನಲ್ಲಿ ತಲೆಗೆ ತಾಗಿ ಗಾಯವಾಗಿತ್ತು. ಚಿಕಿತ್ಸೆಗಾಗಿ ತುರ್ತು ರೈಲು ನಿಲ್ದಾಣ ಒಂದರಲ್ಲಿ ಇಳಿದಿದ್ದು ಆ ಸಮಯದಲ್ಲಿ ವ್ಯಕ್ತಿ ತನ್ನ ಮನಸ್ಸಿನ ಸ್ತಿಮಿತ ಕಳೆದುಕೊಂಡು ಉಡುಪಿ ಕಡೆಯ ಬಸ್ಸು ಹತ್ತಿದ್ದರು.
ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ವ್ಯಕ್ತಿಯ ಪತ್ತೆಗಾಗಿ ಶ್ರಮಿಸಿದ್ದು, ರಾತ್ರಿಯ ವೇಳೆ ವ್ಯಕ್ತಿಯ ಮಾಹಿತಿ ಲಭಿಸಿದ್ದು, ಸಾರ್ವಜನಿಕರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ವ್ಯಕ್ತಿ ಸಂಪೂರ್ಣ ಸ್ಪಂದಿಸಿದ್ದು, ಇದೀಗ ಹೊರರಾಜ್ಯದ ಸಂಬಂಧಿಕರ ಪತ್ತೆಯಾಗಿದ್ದು, ಸಂಬಂಧಿಕರು ಉಡುಪಿಗೆ ಬಂದಿದ್ದಾರೆ. ವಿಶು ಶೆಟ್ಟಿ ಮುಖಾಂತರ ಕಾನೂನು ಪ್ರಕ್ರಿಯೆ ನಡೆಸಿ ವಶಕ್ಕೆ ಪಡೆದು ಊರಿಗೆ ತೆರಳಿದ್ದಾರೆ.