ಉಡುಪಿ: ಚೂರ್ಣೋತ್ಸವದೊಂದಿಗೆ ಸಂಪನ್ನಗೊಂಡ ಸಪ್ತೋತ್ಸವ
ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ನಡೆದ ಸಪ್ತೋತ್ಸವ, ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು.
ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇರುವ ಹಿನ್ನೆಲೆ ಯಲ್ಲಿ ಪ್ರತಿ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ (ಜ.14) ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ.
ಪರ್ಯಾಯ ಪುತ್ತಿಗೆ ಮಠದ ಶ್ರೀಗಳೊಂದಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಹಾಗೂ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಇಂದಿನ ಚೂರ್ಣೋತ್ಸವ ದಲ್ಲಿ ಪಾಲ್ಗೊಂಡರು.
ಪೂಜೆಯ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಚಿನ್ನದ ಪಲಕ್ಕಿ ಯಲ್ಲಿ ತಂದು ಸ್ವಾಗತ ಗೋಪುರದ ಎದುರು ನಿಲ್ಲಿಸಲಾದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಸ್ವಾಮೀಜಿಗಳು ರಥವನ್ನೇರಿ ಮಂಗಳಾರತಿ ಬೆಳಗಿದ ಬಳಿಕ ರಥವನ್ನು ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ತರಲಾಯಿತು. ಈ ವೇಳೆ ಶ್ರೀಗಳು ರಥದಿಂದಲೇ ನೆರೆದ ಭಕ್ತರತ್ತ ಪ್ರಸಾದ, ಹಣ್ಣುಹಂಪಲು ಹಾಗೂ ನಾಣ್ಯಗಳನ್ನು ಎಸೆಯುತ್ತಾರೆ.
ಉತ್ಸವದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಮಠದ ವಸಂತ ಮಂಟಪಕ್ಕೆ ತಂದು ಪೂಜಿಸಿ ದೇವರಿಗೆ ಸಮರ್ಪಿತ ಓಕುಳಿಯನ್ನು ಎಲ್ಲಾ ಯತಿಗಳೊಂದಿಗೆ ಭಕ್ತರು ಹಚ್ಚಿಕೊಂಡು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಮಾಡಿದರು. ನೂರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡರು. ಬಳಿಕ ಅನ್ನಸಂತಪರ್ಣೆಗಾಗಿ ಸಿದ್ಧಪಡಿಸಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಯಿತು. ಸಾವಿರಾರು ಮಂದಿ ಇಂದಿನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಉರುಳು ಸೇವೆ: ಈ ಬಾರಿ ಕೃಷ್ಣನ ಭಕ್ತರು ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಉರುಳು ಸೇವೆ ಮಾಡಿದರು. ಸಂಜೆ ರಾಜಾಂಗಣದಲ್ಲಿ ಪುತ್ತಿಗೆ ಪರ್ಯಾಯದ ಮಂಗಳೋತ್ಸವದೊಂದಿಗೆ ಪುತ್ತಿಗೆ ಶ್ರೀಗೆ ತುಲಾಭಾರ ಸಹಿತ ಗುರುವಂದನಾ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಏಳು ರಥಗಳ ಉತ್ಸ: ಪುತ್ತಿಗೆ ಶ್ರೀ ಎರಡು ವರ್ಷಗಳ ಕಾಲ ಶ್ರೀಕೃಷ್ಣನಿಗೆ ನಡೆಸಿದ ವಿಶ್ವ ಗೀತಾ ಪರ್ಯಾ ಯದ ಮಂಗಳೋತ್ಸವ ಪ್ರಯುಕ್ತ ನಾಳೆ ಅಪರೂಪದ ಏಳು ರಥಗಳ ಉತ್ಸವ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.