ಉಡುಪಿ ಶೀರೂರು ಪರ್ಯಾಯ: ಡಿಸಿಸಿ ಬ್ಯಾಂಕ್, ಸಮಸ್ತ ಸಹಕಾರಿ ಸಂಘಗಳಿಂದ ಹಸಿರು ಹೊರೆಕಾಣಿಕೆ
ಉಡುಪಿ: ಜ.18ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಪರ್ಯಾಯ ಮಹೋತ್ಸವದ ಅಂಗವಾಗಿ ನಿನ್ನೆಯಿಂದ ಪ್ರಾರಂಭಗೊಂಡಿರುವ ಹಸಿರು ಹೊರೆಕಾಣಿಕೆ ಸಮರ್ಪಣೆಯ ಎರಡನೇ ದಿನದಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಜಿಲ್ಲೆಯ ಸಮಸ್ತ ಸಹಕಾರಿ ಸಂಘಗಳ ಸಹಕಾರದೊಂದಿಗೆ ಅದ್ಧೂರಿಯ ಹಸಿರು ಹೊರೆಕಾಣಿಕೆ ಮೆರವಣಿಗೆ ಸಂಪನ್ನಗೊಂಡಿತು.
ಸಮಸ್ತ ಸಹಕಾರಿಗಳ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆ, ಎಣ್ಣೆ, ತುಪ್ಪ, ತರಕಾರಿ ಸೇರಿದಂತೆ ಬೃಹತ್ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. 40ಕ್ಕೂ ಅಧಿಕ ವಾಹನಗಳಲ್ಲಿ ಹಸಿರು ಹೊರೆಕಾಣಿಕೆಯ ವಸ್ತುಗಳನ್ನು ತುಂಬಿಸಿಕೊಂಡು ತಟ್ಟಿರಾಯ, ಬಿರುದಾವಳಿ, ಪಟಾಕಿ, ವಾದ್ಯಘೋಷದೊಂದಿಗೆ ಸಾಗಿ ಬರಲಾಯಿತು.
ಇದೇ ಸಂದರ್ಭದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ 20 ಲಕ್ಷ ರೂ.ಮೌಲ್ಯದ ಹಸಿರು ಹೊರೆಕಾಣಿಕೆ ಹಾಗೂ ಧಾರವಾಡದ ಶ್ರೀಕೃಷ್ಣ ಭಕ್ತರಿಂದ ಹೊರೆಕಾಣಿಕೆಯ ಸಮರ್ಪಣೆಯೂ ನಡೆಯಿತು.
ಜೋಡುಕಟ್ಟೆಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ಕೋರ್ಟ್ ರೋಡ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಕನಕದಾಸ ರಸ್ತೆ, ರಥಬೀದಿ, ವಿದ್ಯೋದಯ ಶಾಲೆ ಮಾರ್ಗವಾಗಿ ಅನ್ನವಿಠಲ ಉಗ್ರಾಣ ತಲುಪಿತ್ತು. ಮೆರವಣಿಗೆಯಲ್ಲಿ ಸಾಗಿಬಂದ ಪ್ರಮುಖರನ್ನು ಕನಕದಾಸ ಮಾರ್ಗದಲ್ಲಿ ಪರ್ಯಾಯ ಸ್ವಾಗತ ಸಮಿತಿ ಸಂಚಾಲಕ, ಹೊರೆಕಾಣಿಕೆ ಉಸ್ತುವಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಎಚ್. ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್ ಸಹಿತ ಪ್ರಮುಖರು ಮಾರ್ಲಾಪಣೆಗೈದು ಬರ ಮಾಡಿಕೊಂಡರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಹಿರಿಯ ಸಹಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಕಾಪು ದಿವಾಕರ ಶೆಟ್ಟಿ, ಸುರೇಶ್ ಶೆಟ್ಟಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಉದ್ಯಾವರ, ರಾಜೇಶ್ ಸೇರಿಗಾರ್, ರಾಜೇಶ್ ಹೆಗ್ಡೆ, ಶರತ್ ಕುಮಾರ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಅನುಷಾ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಪ್ರಮುಖರಾದ ಶ್ರೀಕೃಷ್ಣರಾಜ ಕೊಡಂಚ, ಭಾಸ್ಕರ್ ರಾವ್ ಕಿದಿಯೂರು, ಪ್ರೊ. ಶಂಕರ್, ಯು.ಬಿ. ಶ್ರೀನಿವಾಸ, ನಾರಾಯಣ ದಾಸ ಉಡುಪ, ವಿಷ್ಣುಪ್ರಸಾದ್ ಪಾಡಿಗಾರು, ಗಣೇಶ್ ರಾವ್, ಮಂಜುನಾಥ ಉಪಾ ಧ್ಯಾಯ, ಹಯವದನ ಭಟ್, ಗುರುದಾಸ, ಮುರಳಿಕೃಷ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.