ಉಡುಪಿ: ಸಾಮಾಜಿಕ ಕಾರ್ಯಕರ್ತ ಖತೀಬ್ ಅಬ್ದುಲ್ ರಶೀದ್ ನಿಧನ
ಉಡುಪಿ: ಸಾಮಾಜಿಕ ಕಾರ್ಯಕರ್ತ ಹಾಗೂ ಜಮಿಯತುಲ್ ಫಲಾಹ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಮಲ್ಪೆ (68) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಖತೀಬ್ ಅಬ್ದುಲ್ ರಶೀದ್ ಅವರು ಸಾಮುದಾಯಿಕ ಮತ್ತು ಸಾಮಾಜಿಕವಾಗಿ ಹಾಗೂ ಕೋಮು ಸೌಹಾರ್ದತೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸ್ಥಾಪಕ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷರಾಗಿ, ಸಹಬಾಳ್ವೆ ಸಂಘಟನೆಯ ಆರಂಭಿಕ ಸದಸ್ಯರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದರು.
ಕೋಮು ಸೌಹಾರ್ದ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು, ಸಯ್ಯದಿನ ಅಬೂಬಕ್ಕರ್ ಸಿದೀಕ್ ಜಾಮೀಯಾ ಮಸೀದಿಯ ಅಧ್ಯಕ್ಷರಾಗಿ, ಎಸ್.ಐ.ಓ ಮಲ್ಪೆ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಹಬಾಳ್ವೆ ಸಂಚಾಲಕ ಪ್ರೊ. ಫಣಿರಾಜ್, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷ ಪ್ರೊ. ಅಬ್ದುಲ್ ಅಝೀಝ್, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಸಾಲಿಹಾತ್ ಸಮೂಹ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ ತೀವ್ರ ಸಂತಾಪ ಸೂಚಿಸಿದ್ದಾರೆ.