ಸಂಚಾರಿ ನಿಯಮ ಪಾಲನೆ ಕಡ್ಡಾಯ: ಟ್ರಾಫಿಕ್ ಎಸ್ಸೈ ಅನೂಪ್
ಕುಂದಾಪುರದಲ್ಲಿ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
ಕುಂದಾಪುರ: ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಕುಂದಾಪುರ ರೋಟರಿ ಕ್ಲಬ್ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ, ಸಂಚಾರ ಅರಿವು ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೂಪ್ ನಾಯಕ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಲಾಯಿಸು ವಾಗ ಮೊಬೈಲ್ ಬಳಕೆ ಮಾಡಬಾರದು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು ಹಾಗೂ ಪಾದಚಾರಿಗಳಿಗೂ ಆದ್ಯತೆ ನೀಡಬೇಕು ಎಂದರು.
ಸಂಚಾರಿ ನಿಯಮಗಳ ಪಾಲನೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದ ಅನೂಪ್ ನಾಯಕ್, ಸಂಚಾರಿ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ ಕೊಡ್ಲಾಡಿ ಆಶಯ ನುಡಿಗಳನ್ನಾಡಿದರು. ಕಾಲೇಜಿನ ರೋಟರಾಕ್ಟ್ ಕ್ಲಬ್ ಸಂಯೋಜಕರಾದ ಗಿರಿರಾಜ್ ಭಟ್ ಸ್ವಾಗತಿಸಿ, ವಿನಯಾ ವಿ. ಶೆಟ್ಟಿ ಪರಿಚಯಿ ಸಿದರು. ಸೂಚನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಿಶ್ವಾಸ್ ವಂದಿಸಿದರು.