ಕುಂದಾಪುರ, ಅ.22: ಕೊಂಕಣ ರೈಲ್ವೆ ನಿಗಮದಲ್ಲಿ ಅನುದಾನದ ಕೊರತೆಯಿದೆ. ಇದರೊಂದಿಗೆ ಆದಾಯವೂ ಇಲ್ಲದಿರುವುದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ ವಾಗಿದೆ. ಆದ್ದರಿಂದ ರಾಜ್ಯ, ಕೇಂದ್ರ ಸರಕಾರಗಳಿಂದ ನಿಲ್ದಾಣದ ಅಭಿವೃದ್ದಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರೈಲು ನಿಲ್ದಾಣದ ಮೂಲಭೂತ ಸೌಕರ್ಯದ ನಿಟ್ಟಿನಲ್ಲಿ ಈ ತಂಗುದಾಣ ಅಗತ್ಯ ವಿತ್ತು. ಈ ಹಿಂದೆ ಲಯನ್ಸ್‌ನವರು ಕೂಡ ಕೊಡುಗೆ ನೀಡಿದ್ದರು. ಮುಂದಿನ ದಿನಗಳಲ್ಲಿ ಇಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯ ಆಗಲಿ. ಇದರೊಂದಿಗೆ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಪ್ರಯ್ನತ್ನ ನಡೆಯುತ್ತಿದೆ. ರಾಜ್ಯ- ಕೇಂದ್ರ ಸರಕಾರದ ಸಹಕಾರದಿಂದ ಇದು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ರೈಲು ಪ್ರಯಾಣಿಕ ರಿಗೆ ರೋಟರಿಯಿಂದ ಉತ್ತಮ ಸೌಕರ್ಯ ಒದಗಿಸಿದ್ದಾರೆ. 4-5 ವರ್ಷದಿಂದ ಇಲ್ಲಿ ಕೆಲವು ರೈಲುಗಳ ನಿಲುಗಡೆ, ಹೊಸ ರೈಲಿಗಾಗಿ ಹೋರಾಟ ನಡೆಯುತ್ತಿದೆ. ಶಾಸಕರು, ಸಂಸದರ ಪ್ರಯತ್ನದಿಂದ ಕೆಲವು ಈಡೇರಿದೆ. ಇನ್ನಷ್ಟು ಆಗಬೇಕಿದೆ. ಖಾಸಗಿ ಸಹಭಾಗಿತ್ವದಲ್ಲಿ ನಿಲ್ದಾಣದ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಮಾತನಾಡಿ, ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರು ಈ ವರ್ಷ ಶಾಶ್ವತ ಹಾಗೂ ಪರಿಣಾಮಕಾರಿ ಯೋಜನೆ ಅನುಷ್ಠಾನಕ್ಕೆ ಕರೆ ನೀಡಿದ್ದು, ಅದರಂತೆ ರೋಟರಿ ದಕ್ಷಿಣದವರು ಸಾರ್ವಜನಿ ಕರಿಗೆ ಪ್ರಯೋಜನ ಆಗುವಂತಹ ಕೊಡುಗೆ ನೀಡಿದ್ದಾರೆ. ನಮ್ಮ 89 ಕ್ಲಬ್‌ಗಳಿಂದಲೂ ಇಂತಹ ಯೋಜನೆಗಳು ಸಾಕಾರಗೊಳ್ಳಲಿದೆ ಎಂದರು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಾ. ಆದರ್ಶ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕೊಂಕಣ್ ರೈಲ್ವೆಯ ಡಿವಿಷನಲ್ ಕಮರ್ಶಿಯಲ್ ಮ್ಯಾನೇಜರ್ ಜಿ.ಡಿ.ಮೀನ, ರೆಡ್‌ಕ್ರಾಸ್ ಅಧ್ಯಕ್ಷ ಜಯಕರ ಶೆಟ್ಟಿ, ಸತ್ಯ ನಾರಾಯಣ ಪುರಾಣಿಕ್, ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ. ರಾವ್, ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿಯ ಸಂಚಾಲಕ ವಿವೇಕ್ ನಾಯಕ್, ಕಾರ್ಯದರ್ಶಿ ಪ್ರವೀಣ್ ಕುಮಾರಂ, ಕೋಶಾಧಿಕಾರಿ ಉದಯ ಭಂಡಾರ್ಕರ್, ಸದಸ್ಯರಾದ ನಾಗರಾಜ್ ಆಚಾರ್, ರಾಘವೇಂದ್ರ ಶೇಟ್, ಕಂದಾವರ ಗ್ರಾಪಂ ಪಿಡಿಒ ಸುನೀಲ್, ರೋಟರಿ ದಕ್ಷಿಣದ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ರೋಟರಿ ಕಾರ್ಯದರ್ಶಿ ಮನೋಹರ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor