2028 ಚುನಾವಣೆಯಲ್ಲಿ ಸ್ಪರ್ಧೆ ಖಚಿತ; ಪಕ್ಷ ನಿರ್ಧರಿಸಿಲ್ಲ: ಮಾಜಿ ಶಾಸಕ ರಘುಪತಿ ಭಟ್
ಉಡುಪಿ, ಅ.22: ಮುಂದಿನ (2028) ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಯಾವ ಪಕ್ಷದಿಂದ ಅಥವಾ ಸ್ವತಂತ್ರವಾಗಿಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮೂರು ಬಾರಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಮತ್ತೆ ತನ್ನನ್ನು ಕರೆದರೆ ಖುಷಿಯಿಂದ ಹೋಗುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೂ ತಮಗೆ ಆಹ್ವಾನವಿದೆ. ಕಾಂಗ್ರೆಸ್ ಸೇರ್ಪಡೆ ಕುರಿತಂತೆಯೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನನ್ನ ಹಿತಚಿಂತಕರ, ಅಭಿಮಾನಿಗಳ ಅಭಿಪ್ರಾಯಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಸದ್ಯ ಜನರೊಂದಿಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯಲ್ಲಿದ್ದಾಗ ಪಕ್ಷದೊಂದಿಗೆ ಸೇರಿ ಚುನಾವಣಾ ತಯಾರಿ ನಡೆಸುತ್ತಿದ್ದೆ. ಆದರೆ, ಸದ್ಯ ಪಕ್ಷದಿಂದ ದೂರವಿರುವುದರಿಂದ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ಖಚಿತ ಎಂದರು.
ಬಿಜೆಪಿಗೆ ನನ್ನನ್ನು ಮತ್ತೆ ಆಹ್ವಾನಿಸಿದರೆ ಯಾರ ಅಭಿಪ್ರಾಯ ಕೇಳುವ ಅಗತ್ಯವಿಲ್ಲ. ಅವರೆಲ್ಲರೂ ನಮ್ಮವರೇ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆಲ್ಲುವಂತೆ ಪಕ್ಷದ ಸಂಘಟನೆ ಮಾಡಿದ್ದೇನೆ. ಆದರೆ ಈ ಬಾರಿ ಇದುವರೆಗೆ ಜಿಲ್ಲಾಮಟ್ಟದಲ್ಲಿ ಯಾರೊಬ್ಬರೂ ನನ್ನನ್ನು ಕರೆದು ಮಾತನಾಡಿಸದಿರುವುದು ಅತ್ಯಂತ ನೋವನ್ನುಂಟುಮಾಡಿದೆ ಎಂದವರು ಬೇಸರದಿಂದ ನುಡಿದರು.
ಚುನಾವಣಾ ಸ್ಪರ್ಧೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಂಡರೆ ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ. ಅದಕ್ಕೂ ಮೊದಲು ಅಭಿಮಾನಿಗಳು ಹಾಗೂ ತಮ್ಮೊಂದಿಗೆ ಕೆಲಸ ಮಾಡಿದವರ ಅಭಿಪ್ರಾಯ ಪಡೆಯುತ್ತೇನೆ. ಆದರೆ, ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ಪಕ್ಷೇತರನಾಗಿ ಸ್ಪರ್ಧಿಸುವುದಾದರೆ ಅಭಿಮಾನಿಗಳು ಮತ್ತು ಬೆಂಬಲಿಗರ ಅಭಿಪ್ರಾಯ ಹಾಗೂ ಚರ್ಚೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ವಿವರಿಸಿದರು.
ಬಿಜೆಪಿ ತೊರೆದು ಹೋದ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕುರಿತು ರಾಜ್ಯಮಟ್ಟದ ನಾಯಕರು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಕ್ಷದಿಂದ ಯಾವಾಗ ಕರೆ ಬಂದರೂ ಮತ್ತೆ ಪಕ್ಷಕ್ಕೆ ಸೇರ್ಪಡೆಯಾ ಗುತ್ತೇನೆ. ಸದ್ಯ ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.