ಉಡುಪಿ | ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟಕ್ಕೆ ಚಾಲನೆ
ಉಡುಪಿ, ಡಿ.22: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ, ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಕಟಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳಲ್ಲಿ ಛಲ ನಿರಂತರವಾಗಿ ಇರಬೇಕು. ಹಿರಿಯರು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ಯೋಗ, ಪ್ರಾಣಾಯಾಮ, ಕಲಿಕೆಯ ಗುರಿ, ಗುರುಗಳಿಗೆ ನೀಡುವ ಗೌರವದಿಂದಾಗಿ ಇಂದು ವಿದೇಶಿಯರು ನಮ್ಮ ಕಡೆಗೆ ಮುಖ ಮಾಡಿದ್ದಾರೆ. ಆದರೆ ನಾವು ಪಾಶ್ಚಿಮಾತ್ಯ ಕಡೆಗೆ ಮುಖ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಟಪಾಡಿ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ, ಬೆಲ್ಟ್ ಕುಸ್ತಿಯು ಪಾರಂಪರಿಕ ಕ್ರೀಡೆ ಆಗಿದೆ. ರಾಜರ ಕಾಲದಿಂದಲೂ ಈ ಕ್ರೀಡೆ ಇತ್ತು. ಆದರೆ ರಾಜ್ಯದಲ್ಲಿ ಇತ್ತೀಚೆಗಷ್ಟೇ ಈ ಕ್ರೀಡೆ ಬೆಳಕಿಗೆ ಬರುತ್ತಿದೆ. ಈ ಕ್ರೀಡೆಯ ಉಳಿವಿಗೆ ಗಮನ ಹರಿಸಬೇಕು. ಸ್ಪರ್ಧಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಅಧ್ಯಕ್ಷ ಮಂಜುನಾಥ ಭಟ್, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಮಾರುತಿ ಉಪಸ್ಥಿತರಿದ್ದರು.