×
Ad

ಉಡುಪಿ | ಕ್ರಿಸ್ಮಸ್ ಆಚರಣೆ ವೇಳೆ ಕ್ರೈಸ್ತರ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ

Update: 2025-12-27 16:22 IST

ಉಡುಪಿ, ಡಿ.27: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳನ್ನು ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ.

ಉಡುಪಿ ಕಥೊಲಿಕ ಧರ್ಮಪ್ರಾಂತ್ಯ :

ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆಯಾಗಿದೆ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯ ತೀವ್ರ ಕಳವಳ ಹಾಗೂ ನೋವು ವ್ಯಕ್ತಪಡಿಸಿದೆ

ಜಗತ್ತಿಗೆ ಶಾಂತಿ, ಪ್ರೀತಿ, ಕ್ಷಮೆಯನ್ನು ಭೋದಿಸಿದ ಯೇಸು ಸ್ವಾಮಿಯ ಜನನದ ಹಬ್ಬ ಈ ವರ್ಷ ಭಾರತದ ಕ್ರೈಸ್ತ ಸಮುದಾಯಕ್ಕೆ ಭಯ ಮತ್ತು ಆತಂಕವನ್ನು ಸೃಷ್ಟಿ ಮಾಡಿದೆ. ದೇಶದ ವಿವಿಧೆಡೆ ಕ್ರಿಸ್ಮಸ್ ಆಚರಣೆಯ ವೇಳೆ ಮತಾಂಧ ವ್ಯಕ್ತಿಗಳು ಹಲ್ಲೆ ನಡೆಸಿರುವುದು ಹಬ್ಬದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿದೆ. ಹಾಳುಗೆಡವಿರುವುದು ಸಂವಿಧಾನದ ತತ್ವದಡಿ ನಂಬಿಕೆ ಇಟ್ಟು ಭಾರತ ಒಂದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ನೋವು ತಂದಿದೆ.

ದೇಶದ ಪ್ರಧಾನ ಮಂತ್ರಿಗಳು ದೆಹಲಿಯ ಚರ್ಚಿನಲ್ಲಿ ಕ್ರಿಸ್ಮಸ್ ಪ್ರಾರ್ಥನೆಗೆ ಜೊತೆಯಾಗುತ್ತಿದ್ದರೆ ಇನ್ನೊಂದೆಡೆ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ವ್ಯಕ್ತಿಗಳ ಅದೇ ಕ್ರಿಸ್ಮಸ್ ಹಬ್ಬದ ಆಚರಣೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರಧಾನಿಯವರ ಕ್ರಿಸ್ಮಸ್ ಹಬ್ಬದ ಕಾಳಜಿ ಶ್ಲಾಘನೀಯವಾದರೂ, ಅದೇ ವೇಳೆ ಅವರ ಅನುಯಾಯಿಗಳು ಎನಿಸಿಕೊಂಡವರು ದೇಶದಾದ್ಯಂತ ಕ್ರಿಸ್ಮಸ್ ಆಚರಣೆಗಳ ಮೇಲೆ ದಾಳಿ ನಡೆಸಿರುವುದು ಸಂವಿಧಾನದ ಮೌಲ್ಯಗಳ ಮೇಲೆ ಸವಾರಿ ಮಾಡಿದಂತಿದೆ.

ದೇಶದ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಇಂತಹ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೇಶದ ಆಡಳಿತದ ಚುಕ್ಕಾಣಿ ನಡೆಸುತ್ತಿರುವವರು ಎಲ್ಲಾ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡುವುದರೊಂದಿಗೆ ಕ್ರೈಸ್ತ ಸಮುದಾಯ ಹಾಗೂ ಅವರು ನಡೆಸುತ್ತಿರುವ ಎಲ್ಲಾ ಸಂಸ್ಥೆಗಳಿಗೆ ಭದ್ರತೆ ನೀಡುವಂತೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಥೊಲಿಕ್ ಸಭಾ ಉಡುಪಿ :

ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಶಾಂತಿಯುತವಾಗಿ ಕ್ರಿಸ್ಮಸ್ ಕ್ಯಾರಲ್ಸ್ ಹಾಡುತ್ತಿದ್ದವರ ಮೇಲೆ, ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಗುರಿಯಾಗಿಸಿ ಮತಾಂಧ ಶಕ್ತಿಗಳು ಸೇರಿಕೊಂಡು ವ್ಯವಸ್ಥಿತ ದಾಳಿ ನಡೆಸಿದ್ದಾರೆ. ಇದು ತಮ್ಮ ನಂಬಿಕೆಯನ್ನು ಶಾಂತಿಯುತವಾಗಿ ಹಬ್ಬ ಆಚರಿಸುವ, ಕಾನೂನು ಪಾಲಿಸುವ ಕ್ರೈಸ್ತರಿಗೆ ಭಯ ಮತ್ತು ಯಾತನೆಗೆ ಕಾರಣವಾಗಿದೆ ಎಂದು ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಟೀಕಿಸಿದೆ.

ಇಂತಹ ಘಟನೆಗಳು ನಮ್ಮ ಸಂವಿಧಾನದ ಚೈತನ್ಯವನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ. ಮತಾಂಧ ಶಕ್ತಿಗಳು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಹಿಂಸೆಯನ್ನು ಬೆಂಬಲಿಸುತ್ತವೆ. ಈ ಉದ್ದೇಶಪೂರ್ವಕ ದಾಳಿಗಳು ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಭಯಮುಕ್ತವಾಗಿ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿವೆ. ಕ್ರೈಸ್ತ ಸಮುದಾಯದ ರಕ್ಷಣೆಗಾಗಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕು ದೇಶದಲ್ಲಿ ಕ್ರೈಸ್ತ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಬದುಕಲು ಅವಕಾಶ ಮಾಡಿ ಕೊಡಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ರೋನಾಲ್ಡ್ ಡಿ.ಆಲ್ಮೇಡಾ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.

ಭಾರತೀಯ ಕ್ರೈಸ್ತ ಒಕ್ಕೂಟ :

ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವ ವ್ಯವಸ್ಥೆಯ ಮೇಲೆ ನಡೆದಿರುವ ಗಂಭೀರ ಹಲ್ಲೆಯಾಗಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸಿದೆ

ಕ್ರಿಸ್ಮಸ್ ಹಬ್ಬ ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಒಂದು ಶಾಂತಿ ಹಾಗೂ ಸಂತೋಷ ತರುವ ಹಬ್ಬವಾಗಿದ್ದು ಎಲ್ಲಾ ಧರ್ಮದವರು ಪ್ರೀತಿಯಿಂದ ಹಾಗೂ ಅಭಿಮಾನದಿಂದ ಸಂಭ್ರಮಿಸ ಲಾಗುತ್ತದೆ. ಆದರೆ ಇದೇ ವೇಳೆ ದೇಶದ ವಿವಿಧೆಡೆ ಕ್ರಿಸ್ಮಸ್ ಆಚರಣೆಯ ವೇಳೆ ಮತಾಂಧ ವ್ಯಕ್ತಿಗಳು ಹಲ್ಲೆ ನಡೆಸಿದ್ದಲ್ಲದೆ ಹಬ್ಬದ ಸಂಭ್ರಮವನ್ನೇ ಹಾಳುಗೆಡವಿರುವುದು ಸಂವಿಧಾನದ ತತ್ವದಡಿ ನಂಬಿಕೆ ಇಟ್ಟು ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ಅತೀ ಹೆಚ್ಚು ನೋವು ತಂದಿದೆ.

ದೇಶದ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಇಂತಹ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಪುಂಡರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ನಿರ್ಭೀತಿಯಿಂದ ಬದುಕುವುದು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ದೇಶದ ಪ್ರಧಾನಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಆಡಳಿತ ನಡೆಸುವ ಸರಕಾರಗಳು ಕ್ರೈಸ್ತ ಸಮುದಾಯಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News