×
Ad

Udupi | ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ

Update: 2026-05-16 14:08 IST

ಉಡುಪಿ, ಮೇ 16: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾವು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ನಡೆಸಿತು.

ರಾಜ್ಯ ಸರಕಾರ ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ತೋರಿ ಜಿಲ್ಲೆಯ ಜನತೆಗೆ ಅನ್ಯಾಯ ಮಾಡುತ್ತಿದೆ. 2013ರಲ್ಲಿ ಉಡುಪಿ ನಗರ ಭಾಗಕ್ಕೆ ಆರಂಭಗೊಂಡ ನರ್ಮ್ ಬಸ್ ಯೋಜನೆಯಲ್ಲಿ 40ಕ್ಕೂ ಹೆಚ್ಚು ಬಸ್ಸುಗಳಿದ್ದರೆ ಇಂದು ಸರಕಾರ ಗ್ಯಾರಂಟಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಶೇ.50ರಷ್ಟು ಬಸ್ಗಳನ್ನು ಕಡಿತಗೊಳಿಸಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಆರೋಪಿಸಿದರು.

ಉಡುಪಿ ಜಿಲ್ಲಾ ಆಸ್ಪತ್ರೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಜಿಲ್ಲೆಯ ಬಡ ರೋಗಿಗಳ ಜೀವದೊಂದಿಗೆ ಆಟವಾಡುತ್ತಿದೆ. ಉಡುಪಿಯ ಪರ್ಯಾಯಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿ ನಂತರ ಬಿಡಿಗಾಸು ನೀಡದೆ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿ ಕಚೇರಿಗೆ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು. ಬಳಿಕ ರಸ್ತೆಗೆ ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮುಖಂಡರಾದ ಸಂಧ್ಯಾ ರಮೇಶ್, ಅಭಿರಾಜ್ ಸುವರ್ಣ, ಶಿವಕುಮಾರ್ ಅಂಬಲಪಾಡಿ, ಸಚಿನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News