×
Ad

ತಾಳಮದ್ದಲೆ, ಕಲಾವಿದರಿಗೆ ವಿಶ್ವೇಶ್ವರ ಭಟ್ಟರಿಂದ ಅವಹೇಳನ, ಅಪಮಾನ ಆರೋಪ: ಕಲಾವಿದರಿಂದ ವ್ಯಾಪಕ ಖಂಡನೆ

"ಸಾರ್ವಜನಿಕ ಕ್ಷಮಾಪಣೆಗೆ ಆಗ್ರಹ"

Update: 2026-01-13 21:38 IST

ಉಡುಪಿ, ಜ.13: ಕರಾವಳಿ, ಮಲೆನಾಡು ಭಾಗದ ಪ್ರಮುಖ ಕಲೆಗಳಲ್ಲಿ ಒಂದಾದ ಯಕ್ಷಗಾನ ತಾಳಮದ್ದಲೆ ಹಾಗೂ ತಾಳಮದ್ದಲೆ ಅರ್ಥಧಾರಿಗಳ ಕುರಿತಂತೆ ಅವಹೇಳನ, ಲೇವಡಿ, ಅಪಮಾನದ ಮಾತುಗಳನ್ನು ಸತತವಾಗಿ ತಮ್ಮ ಮಾಧ್ಯಮಗಳಲ್ಲಿ ಬರೆಯುತ್ತಿರುವ ಹಿರಿಯ ಪತ್ರಕರ್ತ, ಸಂಪಾದಕ ವಿಶ್ವೇಶ್ವರ ಭಟ್ಟರ ನಡೆಗೆ ತಾಳಮದ್ದಲೆ ಕಲಾವಿದರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಭಟ್ಟರು ತಕ್ಷಣ ಈ ಬಗ್ಗೆ ಕ್ಷಮಾಪಣೆ ಕೇಳಿ, ವಿವಾದಕ್ಕೆ ಇತಿಶ್ರೀ ಹಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ವಿಶ್ವೇಶ್ವರ ಭಟ್ಟರು ಕಳೆದ ಕೆಲ ಸಮಯದಿಂದ ತಮ್ಮ ಮಾಧ್ಯಮಗಳಲ್ಲಿ ತಾಳಮದ್ದಲೆ ಕಲಾವಿದರ ಕುರಿತಂತೆ ನಡೆಸುತ್ತಿರುವ ಅವಹೇಳನದ ಅಭಿಯಾನವನ್ನು ಖಂಡಿಸಿ ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಘನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ನೇತೃತ್ವದಲ್ಲಿ 13 ಮಂದಿ ಕಲಾವಿದರು ಇಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಕೇಳಿಬಂತು.

ಪತ್ರಿಕಾಗೋಷ್ಠಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಅರ್ಥಧಾರಿ ವಾಸುದೇವ ರಂಗಭಟ್ಟ ಅವರು, ವಿಶ್ವೇಶ್ವರ ಭಟ್ಟರು ತಮ್ಮ ಪತ್ರಿಕೆಯ ಪ್ರಶ್ನೋತ್ತರ ಅಂಕಣವಾದ ‘ಭಟ್ಟರ ಸ್ಕಾಚ್’ನಲ್ಲಿ ತಾಳಮದ್ದಲೆ ಅರ್ಥಧಾರಿಗಳಲ್ಲೇ ಅತಿ ಹಿರಿಯರಾದ ಹಾಗೂ ಪ್ರಪ್ರಥಮ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ.ಪ್ರಭಾಕರ ಜೋಷಿ ಅವರ ಹಿರಿತನ, ಜ್ಞಾನ, ಅನುಭವಗಳನ್ನು ಪರಿಹಾರ ಮಾಡುತ್ತಾ ಲೇವಡಿಯ ಮಾತುಗಳ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸಿದ್ದರು ಎಂದರು.

ಈ ಬಗ್ಗೆ ತಾವು, ವಿದ್ವಾಂಸರಾದ ಶಿರಸಿಯ ಕೆ.ಉಮಾಕಾಂತ ಭಟ್ಟ ಮತ್ತು ಉಜಿರೆ ಅಶೋಕ್ ಭಟ್ಟರು ಸಂಯಮ ಪೂರ್ಣ, ಸಾತ್ವಿಕ ಪ್ರತಿಭಟನಾ ಪ್ರತಿಕ್ರಿಯೆ ನೀಡಿದ್ದು, ಇದನ್ನು ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಂಡ ಭಟ್ಟರು ತಾಳಮದ್ದಲೆ ಕಲಾವಿದರೆಲ್ಲರ ಮೇಲೂ ತಮ್ಮ ಪತ್ರಿಕೆಯ ಮೂಲಕ ವೈಯಕ್ತಿಕ ದಾಳಿ ನಡೆಸಲಾರಂಭಿಸಿದರು. ತಾಮದ್ದಲೆ ಅರ್ಥಧಾರಿಗಳನ್ನು ‘ಐಟಮ್ ಸಾಂಗ್ ಡ್ಯಾನ್ಸರ್’ ಎಂದು ಕರೆಯುವ ಮಟ್ಟಕ್ಕೂ ಹೋದರು ಎಂದವರು ವಿಷಾಧಿಸಿದರು.

ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ತಾಳಮದ್ದಲೆ ಕಲಾವಿದರನ್ನು ವಿಶ್ವೇಶ್ವರ ಭಟ್ಟರು ಸತತವಾಗಿ ಲೇವಡಿ ಮಾಡಿ ಹೇಳಿಕೆ ನೀಡುತ್ತಿರುವ ಹಿನ್ನೆಲೆ ಯಲ್ಲಿ ಅನಿವಾರ್ಯವಾಗಿ ನಾವು ಕಲಾವಿದರೆಲ್ಲ ಸೇರಿ ಪತ್ರಿಕಾಗೋಷ್ಠಿ ಮೂಲಕ ನಮ್ಮ ಅನಿಸಿಕೆಗಳನ್ನು ವ್ಯಕ್ಟಪಡಿಸುತಿದ್ದೇವೆ. ಭಟ್ಟರ ಈ ಅಭಿಯಾನದ ವಿರುದ್ಧ ನಾಡಿನಾದ್ಯಂತರಿಂದ ಹಾಗೂ ಹೊರನಾಡಿನಿಂದಲೂ ನಮಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ವಿಶ್ವೇಶ್ವರ ಭಟ್ಟರು ಯಾಕಾಗಿ ನನ್ನ ವಿರುದ್ಧ ಲೇವಡಿಯ ಮಾತುಗಳನ್ನು ಬರೆದರು ಎಂದು ನನಗೆ ಗೊತ್ತಿಲ್ಲ. ಅತ್ಯಂತ ದು:ಖಕರ ಸನ್ನಿವೇಶದಲ್ಲಿ ನಾವು ಈ ಪ್ರತಿಕ್ರಿಯೆ ನೀಡುತಿದ್ದೇವೆ. ಕಲೆ, ಕಲಾವಿದರ ಕುರಿತ ಅವರ ಹೇಳಿಕೆಗಳನ್ನು ಖಂಡಿಸುತ್ತಾ, ಅವರು ತಮ್ಮ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದರೆ ನಾವು ನ್ಯಾಯಾಲಯದ ಮೆಟ್ಟಿಲು ಏರಬೇಕಾ ಗುತ್ತದೆ ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಉಳಿದ ಹಿರಿಯ ಹಾಗೂ ಕಿರಿಯ ಕಲಾವಿದರು ಮಾತನಾಡಿ, ತಾಳಮದ್ದಲೆ ಕಲೆ ಹಾಗೂ ಕಲಾವಿದರು ವಿಮರ್ಶಾತೀತರಲ್ಲ. ಯಾವುದೇ ಮಾಧ್ಯಮಗಳಲ್ಲಾದರೂ ಪ್ರಕಟವಾಗುವ ಕಲೆಯ ಯಾ ಕಲಾವಿದ ಕುರಿತು ಸಭ್ಯ ವಿಮರ್ಶೆಗೆ ನಾವೆಲ್ಲರೂ ಮುಕ್ತವಾಗಿ ನಮ್ಮನ್ನೊಡ್ಡಿಕೊಳ್ಳುತೇವೆ. ಆದರೆ ವಿಶ್ವೇಶ್ವರ ಭಟ್ಟರ ಕಲೆಯ ಕುರಿತಾದ ಅಜ್ಞಾನ ದಿಂದ ಕೂಡಿದ, ಕಲಾವಿದರ ವೈಯಕ್ತಿಕ ತೇಜೋವಧೆ ಮಾಡುವ ದುಷ್ಟ ಹುನ್ನಾರವನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸುತ್ತೇವೆ ಎಂದರು.

‘ಪತ್ರಿಕಾಧರ್ಮಕ್ಕೆ ಬಾಹಿರವಾದ, ಹೀನ ಅಭಿರುಚಿಯ, ಅತಿರೇಕದ ಸೀಮೆಯನ್ನು ಮೀರಿದ ಈ ಎಲ್ಲಾ ಬರಹ, ಲೇಖನಗಳನ್ನು ಅರ್ಥಧಾರಿಗಳಾದ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಿ ಅವರ ಪ್ರಯತ್ನವನ್ನು ಹಿಮ್ಮೆಟ್ಟಿಸಬೇಕಾ ದುದು ನಮ್ಮೆ ಬದ್ಧತೆ ಎಂಬ ನೆಲೆಯಲ್ಲಿ ನಾವೆಲ್ಲರೂ ಇಂದು ಒಟ್ಟಾಗಿ ಇಲ್ಲಿ ಸೇರಿದ್ದೇವೆ. ನಮ್ಮೆಲ್ಲರ ಸಹಮತದ ಬೇಡಿಕೆಗಳನ್ನು ಮಂಡಿಸುತಿದ್ದೇವೆ ಎಂದರು.

ಸಾರ್ವಜನಿಕವಾಗಿ ಈ ಕಲೆ ಹಾಗೂ ಕಲಾವಿದರನ್ನು ಅಪಮಾನಿಸುವ ಪ್ರವೃತ್ತಿಯನ್ನು ನಿಲ್ಲಿಸಿ, ತಿದ್ದಿಕೊಳ್ಳಲು ಸೂಚಿಸಿದ ಮಾರ್ಗಗಳನ್ನು ಧಿಕ್ಕರಿಸಿ, ಮತ್ತೆ ಪತ್ರಿಕೆ ಮೂಲಕ ತಪ್ಪುಗಳನ್ನು ಪುನರಾವರ್ತಿಸಿದರೆ ಅರ್ಥಧಾರಿಗಳು ಸಾಮೂಹಿಕವಾಗಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಕಾನೂನಿನ ಮೊರೆ ಹೋಗಿ ಪರಿಹಾರ ಪಡೆಯಬೇಕು. ಭಟ್ಟರ ವಿರುದ್ಧ ನ್ಯಾಯಾಲಯಗಳಲ್ಲಿ ಮಾನನಷ್ಟವೂ ಸೇರಿದಂತೆ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತೇವೆ ಎಂದು ಕಲಾವಿದರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ತಾಮದ್ದಲೆ ಕಲಾವಿದರಾದ ಸರ್ಪಂಗಳ ಈಶ್ವರ ಭಟ್ಟ, ವಿ.ಉಮಾಕಾಂತ ಭಟ್ಟ, ವಿ.ಹಿರಣ್ಯ ವೆಂಕಟೇಶ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಉಜಿರೆ ಅಶೋಕ ಭಟ್ಟ, ರಾಧಾಕೃಷ್ಣ ಕಲ್ಚಾರ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹರೀಶ್ ಬಳಂತಿಮುಗರು, ಡಾ.ಪ್ರದೀಪ್ ಸಾಮಗ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪವನ್ ಕಿರಣ್ಕೆರೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಉಪಸ್ಥಿತರಿದ್ದರು.

ತಾಳಮದ್ದಲೆ ಕಲಾವಿದರ ಬೇಡಿಕೆಗಳು

*ತಮ್ಮ ಅಬದ್ಧ ಬರಹಕ್ಕೆ ಹಾಗೂ ಅರ್ಥಧಾರಿಗಳ ಕುರಿತಾದ ಮಾನಹಾನಿಕರ ಹೇಳಿಕೆಗಳಿಗೆ ವಿಶ್ವೇಶ್ವರ ಬಟ್ಟರು ಸಾರ್ವಜನಿಕವಾಗಿ ತಮ್ಮ ಪತ್ರಿಕೆಯಲ್ಲೇ ಅರ್ಥಧಾರಿಗಳ, ಕಲಾಭಿಮಾನಿಗಳ ಕ್ಷಮೆ ಕೋರಬೇಕು.

*ಅವರ ಅಂಕಣದಲ್ಲಿ ಹಾಸ್ಯ ಬರಹದ ಹೆಸರಿನಲ್ಲಿ ತಾಳಮದ್ದಲೆ ಅರ್ಥಧಾರಿಗಳ ತೇಜೋವಧೆ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ, ಮುಂದೆ ತಮ್ಮ ಪತ್ರಿಕೆಯಲ್ಲಿ ಇಂತಹ ಅನುಚಿತ ವರ್ತನೆಯನ್ನು ಮುಂದುವರಿಸುವುದಿಲ್ಲ ಎಂಬ ಬದ್ಧತೆಯನ್ನು ವ್ಯಕ್ತಪಡಿಸಬೇಕು.

*ಇನ್ನು ಮುಂದದೆ ಈ ಕಲೆಯನ್ನು ಗೌರವಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾ ಕಲಾವಿದರ ಆತ್ಮಗೌರವಕ್ಕೆ ಚ್ಯುತಿಯುಂಟು ಮಾಡಿದ ತನ್ನ ಪ್ರವೃತ್ತಿಯನ್ನು ತಿದ್ದಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News