ವಿವೇಕಾನಂದರ ಚಿಂತನೆಗಳು ಬಹುತ್ವದ ಸಂಕೇತ: ಡಾ.ನಿಕೇತನ
ಉಡುಪಿ, ಜ.19: ಬಹುತ್ವ ಎಂದರೆ ಎಲ್ಲಾ ಧರ್ಮಗಳ ನಿಜವಾದ ಸಾರವನ್ನು ಅರ್ಥಮಾಡಿಕೊಂಡು ಸಮನ್ವಯತೆ ಯಿಂದ ಬದುಕುವುದು. ಸ್ವಾಮಿ ವಿವೇಕಾನಂದರು ಈ ತತ್ವವನ್ನು ದೇಶ-ವಿದೇಶಗಳಲ್ಲಿ ಹರಡುವ ಮೂಲಕ ನಮ್ಮ ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಲೇಖಕಿ ಮತ್ತು ಚಿಂತಕಿ ಡಾ. ನಿಕೇತನ ಹೇಳಿದ್ದಾರೆ.
ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ತೋನ್ಸೆ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹೂಡೆ, ಸಾಲಿಹಾತ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಹೂಡೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ನಮ್ಮ ಸಂವಿಧಾನದ ಮೂಲತತ್ವ ಸಹ ಇದೇ ಆಗಿದೆ. ಈ ದೃಷ್ಟಿಯಿಂದ ವಿವೇಕಾನಂದರ ಚಿಂತನೆಗಳು ಈ ದೇಶದ ಬಹುತ್ವದ ಅಡಿಪಾಯವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಸಾಲಿಹಾತ್ ಶಿಕ್ಷಣ ಅಕಾಡೆಮಿಯ ಮುಖ್ಯಸ್ಥರಾದ ಹಾಸೀಬ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರು ಕಾಯ್ದು ಕೊಂಡು ಬಂದ ಧರ್ಮ ಸಮನ್ವಯತೆ ಮತ್ತು ಅಹಿಂಸೆಯನ್ನು ನಾವು ಪಾಲಿಸಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ದಿವ್ಯಾ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶಮೀನಾ ಪ್ರಾರ್ಥಿಸಿದರು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಸ್ವಾಗತಿಸಿದರು. ರೆಡ್‌ಕ್ರಾಸ್ ಖಜಾಂಚಿ ರಮಾದೇವಿ ಉಪಸ್ಥಿತರಿದ್ದರು. ಸಾಲಿಹಾತ್ ಅಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸುನಂದ ವಂದಿಸಿದರೆ, ಶಿಕ್ಷಕಿ ಮಮತ ಕಾರ್ಯಕ್ರಮ ನಿರೂಪಿಸಿದರು.