×
Ad

ಕುಂದಾಪುರ ರಾ.ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ: ಪುರಸಭೆ ವಿಶೇಷ ಸಭೆಯಲ್ಲಿ ಗುತ್ತಿಗೆದಾರರು, ಇಂಜಿನಿಯರ್‌ಗೆ ತರಾಟೆ

Update: 2025-05-23 23:39 IST

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದ ಸರ್ವಿಸ್ ರಸ್ತೆಯಲ್ಲಿ ನೀರು ನಿಲ್ಲುವ ಕುರಿತು ಸದಸ್ಯರು ಗುರುವಾರ ನಡೆದ ಕುಂದಾಪುರ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಹೆದ್ದಾರಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅಧ್ಯಕ್ಷ ಮೋಹನ್‌ದಾಸ ಶೆಣೈ, ಸದಸ್ಯರಾದ ಅಬ್ಬು ಅಹಮದ್, ಶೇಖರ ಪೂಜಾರಿ, ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸೂಚಿಸಿದರೂ ಇನ್ನು ಕೂಡ ಸಮಸ್ಯೆಯನ್ನು ಸರಿಪಡಿಸಲಿಲ್ಲ. ಇಲ್ಲಿನ ಚರಂಡಿಯನ್ನು ಹೂಳೆತ್ತಲಿಲ್ಲ. 4 ವರ್ಷಗಳಿಂದ ಈ ಸಮಸ್ಯೆ ಹಾಗೆಯೇ ಇದೆ ಎಂದು ದೂರಿದರು. ತಕ್ಷಣವೇ ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ಎಂಜಿನಿಯರ್ ಬಶೀರ್ ಭರವಸೆ ನೀಡಿದರು.

ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ 11ಲಕ್ಷ ರೂ. ನೀರಿನ ಬಿಲ್ ಬಾಕಿ ಇದೆ ಎಂದು ನೀರಿನ ಸಂಪರ್ಕ ರದ್ದು ಮಾಡಿರುವ ಬಗ್ಗೆ ಚರ್ಚೆಗಳು ನಡೆದವು. ಸದಸ್ಯರಾದ ಸಂತೋಷ್ ಶೆಟ್ಟಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ನೀರಿನ ಸಮಸ್ಯೆಯಿಂದಾಗಿ ಆಸ್ಪತ್ರೆಯ ರೋಗಿಗಳಿಗೆ ಸಮಸ್ಯೆ ಆಗಬಾರದು. ಈ ಬಗ್ಗೆ ಜನರಿಗೆ ಪುರಸಭೆ ಬಗ್ಗೆ ತಪ್ಪುಅಭಿಪ್ರಾಯ ಬರಬಾರದು ಎಂದು ತಿಳಿಸಿದರು.

ಈ ಬಗ್ಗೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ಸ್ಪಷ್ಟನೆ ನೀಡಿ, 73 ಜನರಿಗೆ ಡಯಾಲಿಸಿಸ್, ಒಳರೋಗಿಗಳು, ಹೊರರೋಗಿಗಳು ಸಹಿತ ಪ್ರತಿದಿನ ಆಸ್ಪತ್ರೆಗೆ ತುಂಬಾ ರೋಗಿಗಳು ಬರುತ್ತಾರೆ. ಆದುದರಿಂದ ನೀರಿನ ಅವಶ್ಯಕತೆ ಸಹಜವಾಗಿ ಸಾಕಷ್ಟು ಇರುತ್ತದೆ. ಈ ಮಧ್ಯೆ ಒಂದು ವಾರ ನೀರಿನ ಸಮಸ್ಯೆ ಆಗಿತ್ತು. ಇದಕ್ಕೆ ಪುರಸಭೆಯವರು ಸ್ಪಂದಿಸಿ ಸರಿಪಡಿಸಿದ್ದಾರೆ ಎಂದರು.

ಅಧ್ಯಕ್ಷ ಮೋಹನದಾಸ ಶೆಣೈ, ಕುಡಿಯುವ ನೀರಿನ ನಿರ್ವಹಣೆ ಜಲಸಿರಿಯವರು ಮಾಡುತ್ತಿದ್ದು ಪುರಸಭೆ ನೇರ ಭಾಗೀದಾರ ಅಲ್ಲ. ಬಿಲ್ ಬಾಕಿಗಾಗಿ ಕಡಿತ ಮಾಡಿಲ್ಲ. ಅದರಲ್ಲೂ ಸರಕಾರಿ ಆಸ್ಪತ್ರೆಯ ನೀರಿನ ಸಂಪರ್ಕ ಕಡಿತ ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲಿನ ತಾಂತ್ರಿಕ, ಪೈಪ್‌ಲೈನ್ ಸಮಸ್ಯೆ ಸರಿಪಡಿಸಿಕೊಳ್ಳಬೇಕು. ಪುರಸಭೆ ಮೇಲೆ ದೂರು ಹಾಕುವುದು ಸರಿಯಲ್ಲ. ಅನುದಾನಗಳು ಬಂದಾಗ ಹಂತಹಂತವಾಗಿ ಬಿಲ್ ಪಾವತಿಸಬೇಕು ಎಂದರು.

ನೆಹರು ಮೈದಾನ ಹಸ್ತಾಂತರ: ಕುಂದಾಪುರ ನೆಹರು ಮೈದಾನ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಸಂತೋಷ್ ಶೆಟ್ಟಿ, ರೋಹಿಣಿ ಉದಯ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪತಹಶೀಲ್ದಾರ್ ಪ್ರಕಾಶ್ ಪೂಜಾರಿ, ಈಗಾಗಲೇ ಇರುವ ಸಂಸ್ಥೆಗಳಿಗೆ ದಾರಿಯ ನಕ್ಷೆ ಮಾಡಿ ಉಳಿಕೆ 1.35 ಎಕರೆ ಜಾಗವನ್ನು ಮೈದಾನಕ್ಕೆ ಮೀಸಲಿರಿಸಿ ಹಸ್ತಾಂತರ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗೆ ಕಳುಹಿಸಲು ಎಸಿಗೆ ನೀಡಲಾಗಿದೆ ಎಂದರು.

ಟಿ.ಟಿ.ರಸ್ತೆಯ ದಲಿತರಿಗೆ ಹಕ್ಕುಪತ್ರ ನೀಡದಿರುವ ಕುರಿತು ಅಧ್ಯಕ್ಷರು ಮಾಹಿತಿ ಕೇಳಿದಾಗ, ಹಕ್ಕುಪತ್ರ ಪುರಸಭೆಯೇ ನೀಡಬೇಕು ಎಂದು ಉಪ ತಹಶೀಲ್ದಾರ್ ತಿಳಿಸಿದರು. ಆಸ್ಪತ್ರೆಯಲ್ಲಿ ಮೆಡಿಕಲ್ ಚೀಟಿ ನೀಡುವ ಬಗ್ಗೆ ರಾಘವೇಂದ್ರ ಖಾರ್ವಿ ಕೇಳಿದ ಪ್ರಶ್ನೆ, ಸರಕಾರಿ ಆಸ್ಪತ್ರೆಯ ಆವರಣದಲ್ಲಿನ ಜನೌಷಧ ಕೇಂದ್ರವನ್ನು ಸ್ಥಗಿತಗೊಳಿಸುವ ಸರಕಾರದ ಆದೇಸದ ಕುರಿತು ಸದಸ್ಯರ ಮಧ್ಯೆ ಭಾರೀ ಚರ್ಚೆಗಳು ನಡೆದವು.

ಸಭೆಯಲ್ಲಿ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ್ ಜೆ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News