ಪರಶುರಾಮ ಪ್ರತಿಮೆಯ ಕಾಮಗಾರಿ, ಪ್ರತಿಷ್ಠಾಪನೆ ಶೀಘ್ರವೇ ನಡೆಸಿ: ಶಾಸಕ ಸುನಿಲ್ ನೇತೃತ್ವದಲ್ಲಿ ಪ್ರತಿಭಟನೆ, ಡಿಸಿಗೆ ಮನವಿ
ಉಡುಪಿ, ಆ.6: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನ ಪ್ರವಾಸೋದ್ಯಮವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲು ಹಾಗೂ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಅನುದಾನವನ್ನು ಕೂಡಲೇ ಮಂಜೂರು ಮಾಡಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಕಾರ್ಕಳ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತಲ್ಲದೇ, ಬಳಿಕ ಈ ಸಂಬಂಧ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿಯೊಂದನ್ನು ಸಲ್ಲಿಸಿತು.
ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದ್ದ ಬೈಲೂರು ಪರಶುರಾಮ ಥೀಮ್ ಪಾರ್ಕ್ ರಾಜಕೀಯ ಕಾರಣದಿಂದ ಸಂಪೂರ್ಣ ರ್ನಿಲಕ್ಷ್ಯಕ್ಕೆ ಒಳಗಾಗಿದ್ದು, ಕಟ್ಟಡಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಕಾಮಗಾರಿಗಳಿಗೆ ಅನುದಾನ ವನ್ನು ತಡೆಹಿಡಿಯಲಾಗಿದ್ದು, ಬಾಕಿ ಉಳಿದಿರುವ 4.33 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಬೇಕು ಎಂದು ವಿ.ಸುನಿಲ್ ಕುಮಾರ್ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೈಲೂರು ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, 2023ರಲ್ಲಿ ಪರಶುರಾಮ ಮೂರ್ತಿಯ ಮರು ವಿನ್ಯಾಸಕ್ಕಾಗಿ ಶಿಲ್ಪಿ ನಿರ್ಮಿತಿ ಕೇಂದ್ರಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದರು. ನಂತರ ಉದಯ್ ಶೆಟ್ಟಿ ಮತ್ತು ಬೆಂಬಲಿಗರು ಬಾಕಿ ಕಾಮಗಾರಿ ನಡೆಸಲು ಬಿಡದೆ ಮೂರ್ತಿ ನೈಜತೆ ಬಗ್ಗೆ ಗೊಂದಲ ಉಂಟು ಮಾಡಿ ತಡೆಯೊಡ್ಡಿದ್ದಾರೆ. ಪ್ರಸ್ತುತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಮೂರ್ತಿ ಪೈಬರ್‌ನದ್ದಲ್ಲ, ಹಿತ್ತಾಳೆಯದ್ದು ಎಂಬುದಾಗಿ ವರದಿ ನೀಡಿದ್ದಾರೆ ಎಂದರು.
ಕಾರ್ಕಳದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಹಳ್ಳ ಹಿಡಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ. ರಾಜಕೀಯ ಕಾರಣದಿಂದ, ವ್ಯವಸ್ಥಿತ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಂದ ಪ್ರವಾಸಿ ತಾಣವಾಗಿದ್ದ ಪರಶುರಾಮ ಥೀಮ್ ಪಾರ್ಕ್‌ನ ಚಟುವಟಿಕೆ ಸಂಪೂರ್ಣ ಸ್ಥಬ್ದಗೊಂಡಿದೆ ಎಂದು ದೂರಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಮುಖರಾದ ಮುಟ್ಲುಪಾಡಿ ಸತೀಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಮಹಾವೀರ ಜೈನ್, ಸುಮಿತ್ ಶೆಟ್ಟಿ, ರಾಕೇಶ್ ಶೆಟ್ಟಿ ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು.
ವಾಹನ ಜಾಥಾ: ಇದಕ್ಕೆ ಮುನ್ನ ಕಾರ್ಕಳದಿಂದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವಾಹನ ಜಾಥಾ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.