×
Ad

ನೃತ್ಯ ಪ್ರದರ್ಶನದ ವಿಶ್ವದಾಖಲೆ: ರೆಮೊನಾ ಪಿರೇರಾಗೆ ಸನ್ಮಾನ

Update: 2025-08-07 18:59 IST

ಉಡುಪಿ, ಆ.7: ನಿರಂತರ್ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಇವರ ಸಂಯುಕ್ತ ಆಶ್ರಯದಲ್ಲಿ 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಬರೆದ ರೆಮೊನಾ ಎವೆಟ್ ಪಿರೇರಾರನ್ನು ಮಂಗಳವಾರ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರೆಮೋನಾ, 170 ಗಂಟೆಗಳ ವಿಶ್ವದಾಖಲೆ ನನ್ನ ಕಾಲೇಜಾದ ಸೆಂಟ್ ಅಲೋಶಿಯಸ್ ನೀಡಿದ ನಿಶ್ಯಬ್ದ ಬೆಂಬಲವಿಲ್ಲದೇ ಸಾಧ್ಯವಿರುತ್ತಿರಲಿಲ್ಲ. ಅವರು ನನ್ನ ಹಿಂದೆ ಸದಾ ನಿಂತಿದ್ದರು. ಜನರು ನನಗೆ ಬೆಂಬಲ ನೀಡಿದ್ದು ಕೇವಲ ಕರ್ತವ್ಯದ ಅರಿವಿನಿಂದಲ್ಲ. ಅವರು ಕಲೆಯ ಬಗ್ಗೆ ಇರುವ ಪ್ರೀತಿ ಮತ್ತು ಬದ್ಧತೆಯಿಂದ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತ ನಾಡಿ, ರೆಮೋನಾ ಮೂರನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಆರಂಭಿಸಿದರು. ಅವರ ಪರಿಶ್ರಮದಿಂದ ಇವತ್ತಿನ ಸಾಧನೆ ಸಾಧ್ಯವಾಗಿದೆ. ದೇವರು ಎಲ್ಲರಿಗೂ ಪ್ರತಿಭೆ ನೀಡಿದ್ದಾನೆ. ಆದರೆ ಅದನ್ನು ಗುರುತಿಸಿ ಬೆಳೆಸುವುದು ಕೆಲವು ಜನರಿಗೆ ಮಾತ್ರ ಸಾಧ್ಯ. ನೃತ್ಯವನ್ನು 170 ಗಂಟೆಗಳ ಕಾಲ ನಿರಂತರವಾಗಿ ಮಾಡುವುದು ಅಸಾಧ್ಯ ಎನಿಸಿಕೊಂಡಾಗ, ಅವರು ಅದನ್ನು ಸಾಧ್ಯವನ್ನಾಗಿ ಮಾಡಿದ್ದಾರೆ. ನಮಗೆ ಅವರ ಬಗ್ಗೆ ತುಂಬಾ ಹೆಮ್ಮೆ ಎಂದರು.

ಸೆಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ರೊನಾಲ್ಡ್ ನಜರೆತ್, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರು ವಂ.ಅನಿಲ್ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮಾತನಾಡಿದರು. ಲಯನ್ಸ್ ಗವರ್ನರ್ ಸಪ್ನಾ ಸುರೇಶ್ ಉಡುಪಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಥೊಲಿಕ್ ಸಭಾ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ರಾಷ್ಟ್ರೀಯ ಮಹಿಳಾ ಬಿಲ್ಲವ ಸಂಘ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಉದ್ಯಮಿ ವಿಲ್ಸನ್ ಫೆರ್ನಾಂಡಿಸ್, ಡಾ.ಶೇಖ್ ವಹೀದ್, ತುಳು ಅಕಾಡೆಮಿ ಸದಸ್ಯ ನಾಗೇಶ್ ಕುಮಾರ್ ಉದ್ಯಾವರ, ಉದ್ಯಾವ ರೈಟ್ಸ್ ದುಬಾಯಿ ಕಾರ್ಯದರ್ಶಿ ರಾಯನ್ ಸುವಾರಿಸ್, ಐಸಿವೈಎಂ ಉಡುಪಿ ವಲಯ ಅಧ್ಯಕ್ಷ ರೊವಿನ್ ಪಿರೇರಾ, ನಿರಂತರ ಉದ್ಯಾವರದ ಅಧ್ಯಕ್ಷ ರೋಷನ್ ಕ್ರಾಸ್ಟೊ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಸ್ಟೀವನ್ ಕುಲಾಸೊ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಜೆರಾಲ್ಡ್ ಪಿರೇರಾ ವಂದಿಸಿದರು. ಶಿಕ್ಷಕ ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News