×
Ad

ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ: ತಲ್ಲೂರು ಶಿವರಾಮ ಶೆಟ್ಟಿ

Update: 2025-12-09 16:54 IST

ಉಡುಪಿ, ಡಿ.9: ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ ತುಂಬಿಸುವ ಕಾರ್ಯ ನಡೆಯಬೇಕು ಎಂಬುದೇ ನಮ್ಮ ಹೆಬ್ಬಯಕೆ. ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ರವಿವಾರ ನಡೆದ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25ರಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದು ತಿಳಿಸಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬೆಳೆಯುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಇತ್ತೀಚೆಗೆ ಯಕ್ಷಗಾನಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಇನ್ನಾವ ಕಲೆಗೂ ಸಿಗುತ್ತಿಲ್ಲ. ಇದರಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ ಎಂಬುದು ದಿಟ. ಯಕ್ಷಗಾನಕ್ಕೆ ಈ ಭಾಗದಲ್ಲಿ ಯಶಸ್ವಿ ಕಲಾವೃಂದ ಬಹು ದೊಡ್ಡ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

ರಾಜ್ಯ ರಾಜ್ಯೋತ್ಸವ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ.ಹೆಗಡೆ, ಕೋಟ ಸುರೇಶ್ ಬಂಗೇರ ಮತ್ತು ಐರ್ಬೈಲ್ ಆನಂದ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಿ ಮಚ್ಚಿನ, ಸಮಾಜ ಸೇವಕ ಸತೀಶ್ ಪೂಜಾರಿ ಹಾಗೂ ಕ್ರೀಡಾಪಟು ಸುದೀಪ್ ಶೆಟ್ಟಿ ಮಲ್ಯಾಡಿ ಅವರನ್ನು ಅಭಿನಂದಿಸಲಾಯಿತು. ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಅವರನ್ನು ಗೌರವಿಸಲಾಯಿತು.

ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್ ಶೆಟ್ಟಿ, ಕೃಷ್ಣಯ್ಯ ಆರ್ಚಾ ಬಿದ್ಕಲ್ಕಟ್ಟೆ, ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪೂಜ ಆಚಾರ್ಯ, ಪಂಚಮಿ ವೈದ್ಯ, ಪವನ್ ಆಚಾರ್ಯ, ಕಿಶನ್ ಪೂಜಾರಿ, ಹರ್ಷಿತಾ ಅಮೀನ್ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News