ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಭಟ್ಕಳದ ವ್ಯಕ್ತಿ ದುಬೈನಲ್ಲಿ ಮೃತ್ಯು
ಭಟ್ಕಳ: ದುಬೈನಲ್ಲಿ ಕ್ರಿಕೆಟ್ ಪಂದ್ಯವಾಡುತ್ತಿದ್ದ ವೇಳೆ ಕುಸಿದು ಬಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಮೊಹಮ್ಮದ್ ಸಫ್ವಾನ್ ಶಾನು (38) ಎಂದು ಗುರುತಿಸಲಾಗಿದೆ.
ರವಿವಾರ ಬೆಳಿಗ್ಗೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಫ್ವಾನ್ ಶಾನು ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜೊತೆಗಿದ್ದ ಆಟಗಾರರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 15 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದ ಸಫ್ವಾನ್ ಶಾನು ಅವರು ಅಲ್ಲಿನ ಕ್ರಿಕೆಟ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು ಬಳಿಕ ಸ್ವಂತ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ನಾಲ್ಕು ತಿಂಗಳ ಮಗುವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ತಂದೆ–ತಾಯಿ ಭಾರತದಿಂದ ದುಬೈಗೆ ತೆರಳಿದ್ದರು. ಸೋಮವಾರ ಸಂಜೆ ಅಲ್ ಖುಸೈಸ್ ಸಮಾಧಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿತು.