ಭಟ್ಕಳ: ಶ್ರೀ ಮಾರಿಕಾಂಬಾ ಜಾತ್ರೆಗೆ ಚಾಲನೆ
ಭಟ್ಕಳ: ಪಟ್ಟಣದ ಆರಾಧ್ಯ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿಯ ವಾರ್ಷಿಕ ಜಾತ್ರೋತ್ಸವಕ್ಕೆ ಬುಧವಾರ ಮುಂಜಾನೆ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ದೊರೆಯಿತು. ದೇವಿಯ ಭವ್ಯ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದ ಬಳಿಕ ಭಕ್ತರು ದೇವಿಯ ದರ್ಶನ ಪಡೆದರು.
ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ವಿಶ್ವಕರ್ಮ ಸಮುದಾಯದ ವತಿಯಿಂದ ವಿಶೇಷ ಪೂಜೆ ನೆರವೇರಿತು. ಬುಧವಾರ ಮುಂಜಾನೆ ಮಣ್ಕುಳಿ ಆಚಾರ್ಯರ ಮನೆತನದಿಂದ ದೇವಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಸಂಪ್ರದಾಯದಂತೆ ಜೈನ ಸಮುದಾಯದವರು ಮೊದಲ ಪೂಜೆ ಸಲ್ಲಿಸಿದ ಬಳಿಕ ವೇದಮಂತ್ರಗಳ ಘೋಷ ಹಾಗೂ ಮಂಗಳ ವಾದ್ಯಗಳ ನಡುವೆ ದೇವಿಯ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಗ್ರಾಮದಲ್ಲಿ ಸುಖ–ಶಾಂತಿ ನೆಲೆಸಲಿ, ಸಾಂಕ್ರಾಮಿಕ ರೋಗಗಳು ಮತ್ತು ಸಂಕಷ್ಟಗಳು ದೂರವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ಹೂವಿನ ಟೋಪಿಗಳು, ಎಲೆಗಳಿಂದ ಅಲಂಕರಿಸಿದ ಹಾರಗಳು ಹಾಗೂ ಬೆಳ್ಳಿಯ ಕಣ್ಣುಗಳನ್ನು ಹರಕೆಯ ರೂಪದಲ್ಲಿ ಸಮರ್ಪಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಾಮಾಜಿಕ ಹೋರಾಟಗಾರ ಈರ ನಾಯ್ಕ್ ಚೌತನಿ ಸೇರಿದಂತೆ ಹಲವರು ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಜಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು. ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ದೇವಸ್ಥಾನದ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ಭಕ್ತರ ಅನುಕೂಲಕ್ಕಾಗಿ ಸಂಚಾರ ವ್ಯವಸ್ಥೆ, ಸರತಿ ಸಾಲು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು.
ಎರಡು ದಿನಗಳ ಕಾಲ ನಡೆಯಲಿರುವ ಜಾತ್ರೆಯು ಗುರುವಾರ ಸಂಜೆ ಸಮಾರೋಪಗೊಳ್ಳಲಿದ್ದು, ಸಂಪ್ರದಾಯಬದ್ಧ ಮೆರವಣಿಗೆಯ ಮೂಲಕ ದೇವಿಯ ಮೂರ್ತಿಯನ್ನು ಕರಿಕಲ್ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ವಾರ್ಷಿಕ ಉತ್ಸವಕ್ಕೆ ತೆರೆ ಬೀಳಲಿದೆ.