ಭಟ್ಕಳ: ವಿದ್ಯಾರ್ಥಿಯ ಜೇಬಿನಲ್ಲಿದ್ದ ಮೊಬೈಲ್‌ಗೆ ಬೆಂಕಿ
ಭಟ್ಕಳ: ಪಟ್ಟಣದ ಖಾಸಗಿ ಕಾಲೇಜೊಂದರ ಆವರಣದಲ್ಲಿ ವಿದ್ಯಾರ್ಥಿಯೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್‌ನಿಂದ ಏಕಾಏಕಿ ಹೊಗೆ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದ್ದು, ಅಪಘಾತಕ್ಕೊಳಗಾದ ವಿದ್ಯಾರ್ಥಿಯನ್ನು ಜಯೀಮ್ ಖಯಾಲ್ ಎಂದು ಗುರುತಿಸಲಾಗಿದೆ.
ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ತನ್ನ ಪ್ಯಾಂಟ್ ಜೇಬಿನಿಂದ ಹೊಗೆ ಬರುತ್ತಿರುವುದನ್ನು ಅವರು ಗಮನಿಸಿದ್ದಾರೆ. ತಕ್ಷಣವೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನು ಹೊರಗೆ ಎಸೆದಿದ್ದಾರೆ.
ಬಳಿಕ ಮೊಬೈಲ್‌ನ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋಗಿದ್ದು, ಮೊಬೈಲ್ ಬಹುತೇಕ ನಾಶವಾಗಿದೆ. ಘಟನೆಯಲ್ಲಿ ವಿದ್ಯಾರ್ಥಿಯ ಪ್ಯಾಂಟ್‌ನ ಒಂದು ಭಾಗ ಸುಟ್ಟಿದ್ದು, ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ತಕ್ಷಣ ಮೊಬೈಲ್ ಅನ್ನು ಹೊರಗೆ ಎಸೆದಿದ್ದರಿಂದ ಯಾವುದೇ ಗಂಭೀರ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಮೌಲಾನಾ ಮೊಹಮ್ಮದ್ ಜಾಫರ್ ಫಕೀಹ್ ಭಾವು ನದ್ವಿ, ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮೊಬೈಲ್ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬ್ಯಾಟರಿ ದೋಷ, ಅಧಿಕ ಉಷ್ಣತೆ ಅಥವಾ ಇತರ ತಾಂತ್ರಿಕ ಕಾರಣಗಳಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಭಟ್ಕಳದಲ್ಲಿ ಈ ರೀತಿಯ ಘಟನೆ ಅಪರೂಪವಾಗಿದ್ದು, ಸಾರ್ವಜನಿಕರು ಮೊಬೈಲ್ ಬಳಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.