ಚೆಕ್ ಅಮಾನ್ಯ ಪ್ರಕರಣ: ಆರೋಪಿಯ ಬಂಧನ
ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿಯ ರವೀಶ ವೆಂಕಟ್ರಮಣ ಹೆಗಡೆ ಎಂಬಾತನನ್ನು ಭಟ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಭಟ್ಕಳದ ಈಶ್ವರ ಹೊನ್ನಪ್ಪ ನಾಯ್ಕ ಅವರಿಂದ ರವೀಶ ವೆಂಕಟ್ರಮಣ ಹೆಗಡೆ ಸಾಲ ಪಡೆದಿದ್ದು, ಸಾಲದ ಹಣವನ್ನು ಮರುಪಾವತಿಸುವುದಾಗಿ ತಿಳಿಸಿ ಚೆಕ್ ನೀಡಿದ್ದನು. ಆದರೆ ಚೆಕ್ ಅನ್ನು ಬ್ಯಾಂಕ್‌ಗೆ ಸಲ್ಲಿಸಿದಾಗ ಅಮಾನ್ಯಗೊಂಡಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸಾಲದ ಹಣವನ್ನು ಪಾವತಿಸುವಂತೆ ಸೂಚಿಸಿದರೂ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಈಶ್ವರ ನಾಯ್ಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯವು ಹೆಗಡೆ ವಿರುದ್ಧ ವಾರೆಂಟ್ ಜಾರಿಗೊಳಿಸಿತ್ತು.
ವಾರೆಂಟ್ ಜಾರಿಯಾದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಭಟ್ಕಳ ಪೊಲೀಸರು ಶಿರಸಿಯಲ್ಲಿರುವ ರವೀಶ ವೆಂಕಟ್ರಮಣ ಹೆಗಡೆ ನಿವಾಸಕ್ಕೆ ತೆರಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.