ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿರುವುದು ಮಾದರಿ: ಹಸ್ತಾ ಶೆಟ್ಟಿ
ಭಟ್ಕಳ: ಶ್ರೀ ನಾಗ ಮಾಸ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿಯ ನಾಲ್ಕನೇ ದಿನವಾದ ಬುಧವಾರ ಮಹಿಳಾ ದಸರಾ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಮಧ್ಯಾಹ್ನ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾತ್ರಿ ನಡೆದ ಮಹಿಳಾ ದಸರಾ ಸಾಂಸ್ಕೃತಿಕ ವೇದಿಕೆಯನ್ನು ಅರಣ್ಯ ಉಪಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶಕ್ತಿಮಾತೆಯ ಆರಾಧನೆಯ ನವರಾತ್ರಿ ಸಂದರ್ಭದಲ್ಲಿ ಮಹಿಳೆಯರಿಗಾಗಿಯೇ ವೇದಿಕೆ ಕಲ್ಪಿಸಿ ಮಹಿಳಾ ದಸರಾ ಆಚರಿಸುತ್ತಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಕುಟುಂಬದ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡು ಮಕ್ಕಳ ಲಾಲನೆ, ಪಾಲನೆ ಹಾಗೂ ಹಿರಿಯರ ಆರೈಕೆಯಲ್ಲಿ ನಿರತರಾಗಿರುವ ಮಹಿಳೆಯರು ದೈನಂದಿನ ಒತ್ತಡಗಳಿಂದ ಹೊರಬಂದು ತಮ್ಮಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಪ್ರಥಮ ವರ್ಷದ ಮಹಿಳಾ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿರುವುದು ತಮ್ಮ ಜೀವನದಲ್ಲಿ ಮರೆಯಲಾಗದ ಅನುಭವ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಎಸ್ಎನ್ಡಿಪಿ ರಾಜ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದೀಪಾ ನಾಯ್ಕ ಮಾತನಾಡಿ, ಮಹಿಳೆಯರು ಜಾಗೃತರಾಗಿ ಸಂಘಟಿತರಾಗಬೇಕು. ಸಂಘಟನೆ ಜೀವನದ ಭದ್ರತೆಗೆ ಬುನಾದಿ ಯಾಗಿದ್ದು, ಪರಸ್ಪರ ಸ್ನೇಹ ಮತ್ತು ಸಹಕಾರದಿಂದ ಸಂಕಷ್ಟಗಳನ್ನು ಎದುರಿಸುವ ಧೈರ್ಯ ದೊರೆಯುತ್ತದೆ. ನಾಗ ಮಾಸ್ತಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಮಹಿಳಾ ದಸರಾ ಆಚರಿಸುವ ಮೂಲಕ ಮಹಿಳೆಯರಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಾ. ಸವಿತಾ ಕಾಮತ್ ಹಾಗೂ ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ನಾಯ್ಕ ಮಹಿಳಾ ವೇದಿಕೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತಾ ನಾಗರಾಜ್ ನಾಯ್ಕ ವಹಿಸಿದ್ದರು.
ಆರಂಭದಲ್ಲಿ ರೇಖಾ ನಾಯ್ಕ ಸ್ವಾಗತಿಸಿದರು. ಶ್ರೀ ನಾಗ ಮಾಸ್ತಿ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷ ಮಹತ್ವವಿದೆ. ಜೀವನದ ಒತ್ತಡ ಮತ್ತು ಬೇಸರದಿಂದ ಹೊರಬಂದು ತಮ್ಮ ಪ್ರತಿಭೆ ಪ್ರದರ್ಶಿಸಲು ಮಹಿಳೆಯರು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಭಾಗ್ಯ ನಾಯ್ಕ ವಂದಿಸಿದರು. ಶಿಕ್ಷಕಿ ಪ್ರತಿಭಾ ಕರ್ಕಿಕರ್ ಕಾರ್ಯಕ್ರಮ ನಿರೂಪಿಸಿದರು.