ಎಂಡಿಎಂಎ ಮಾರಾಟಕ್ಕೆ ಯತ್ನ ಆರೋಪ: ವ್ಯಕ್ತಿಯ ಬಂಧನ
ಭಟ್ಕಳ: ಪಟ್ಟಣದ ಕಿದ್ವಾಯಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಭಟ್ಕಳ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಭಟ್ಕಳದ ಬಂದರ್ ರಸ್ತೆಯ ನಿವಾಸಿ ಮೊಹಮ್ಮದ್ ರಿಜ್ವಾನ್ (34) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಅಂದಾಜು 21,800 ಮೌಲ್ಯದ 2.18 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಒಂದು ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆಯನ್ನು ಮುಂದುವರಿಸಲು ಹಾಗೂ ಮಾದಕ ವಸ್ತುವಿನ ಪೂರೈಕೆ ಮತ್ತು ಮಾರಾಟದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರೋಪಿ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸುಮಾರು ಏಳೆಂಟು ತಿಂಗಳ ಹಿಂದೆ ಭಟ್ಕಳಕ್ಕೆ ಮರಳಿದ್ದ. ಬಳಿಕ ಭಟ್ಕಳದಲ್ಲಿ ಕಾಸ್ಮೆಟಿಕ್ ವ್ಯಾಪಾರ ನಡೆಸುತ್ತಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಈ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.