ಭಟ್ಕಳ: ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ನಾಲ್ಕು ಪಥದ ರಸ್ತೆ ಕಾಮಗಾರಿ ಇತ್ತೀಚಿನ ವಾರಗಳಲ್ಲಿ ವೇಗ ಪಡೆದುಕೊಂಡಿದ್ದು, ವಿವಾದವಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಮೂಡಿದೆ.

ನೂರ್ ಮಸೀದಿಯಿಂದ ತೂರ್‌ ಮಸೀದಿ ವರೆಗಿನ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಮಾರ್ಗ ವನ್ನು ಮಂಗಳೂರು ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಪಟ್ಟಣದ ಒಳಭಾಗಕ್ಕೆ ಸಂಪರ್ಕ ಕಲ್ಪಿಸುವ ಸರ್ವಿಸ್‌ ರಸ್ತೆ ನಿರ್ಮಾಣವೂ ಪ್ರಗತಿಯಲ್ಲಿದೆ.

ಆದರೆ, ನೂರ್ ಮಸೀದಿ ಹಾಗೂ ಶಂಸುದ್ದೀನ್ ವೃತ್ತದ ಸುತ್ತಮುತ್ತ ಸಂಚಾರ ದಟ್ಟಣೆ ಮುಂದುವರಿದಿದೆ. ವೃತ್ತದಿಂದ ಪಟ್ಟಣದ ಒಳಭಾಗಕ್ಕೆ ತೆರಳುವ ವಾಹನಗಳು ಹೆದ್ದಾರಿ ದಾಟಬೇಕಾಗಿರುವುದರಿಂದ ತೊಂದರೆ ಎದುರಿಸುತ್ತಿವೆ. ಪಟ್ಟಣದ ಒಳಭಾಗದಿಂದ ವೃತ್ತದತ್ತ ಬರುವ ವಾಹನಗಳು ಹಾಗೂ ಮಂಗಳೂರು ಕಡೆಯಿಂದ ಹೊನ್ನಾವರಕ್ಕೆ ತೆರಳುವ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಗಝಾಲಿ ಕಾಂಪ್ಲೆಕ್ಸ್‌ ಕಡೆಯಿಂದ ನೂರ್ ಮಸೀದಿ ಮಾರ್ಗವಾಗಿ ವೃತ್ತದತ್ತ ಸಂಪರ್ಕ ಕಲ್ಪಿಸುವ ಸರ್ವಿಸ್‌ ರಸ್ತೆಯ ಕೆಲವು ಭಾಗಗಳ ಕಾಮಗಾರಿ ಪೂರ್ಣಗೊಂಡಿದೆ. ರಂಗೀನ್ ಕಟ್ಟಾ ಕಡೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯೂ ಭಾಗಶಃ ಮುಗಿದಿದೆ. ಆದರೆ, ಪಟ್ಟಣದ ಒಳಭಾಗದಿಂದ ಹೆದ್ದಾರಿ ಮೂಲಕ ಅಂಜುಮನ್ ಕಾಲೇಜು, ಸರ್ಕಾರಿ ಆಸ್ಪತ್ರೆ ಹಾಗೂ ಸಂತೆ ಮಾರುಕಟ್ಟೆಗೆ ತೆರಳುವ ವಾಹನಗಳಿಗೆ ಯಾವ ರೀತಿಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಐಆರ್‌ಬಿ ಕಂಪನಿ ಭರವಸೆ ನೀಡಿದೆ. ಪ್ರಸ್ತುತ ಕಾಮಗಾರಿಯ ವೇಗ ಗಮನಿಸಿದರೆ ಗಡುವಿನೊಳಗೆ ಕೆಲಸ ಮುಗಿಯುವ ಸಾಧ್ಯತೆ ಇದೆ. ಆದರೆ, ಭೂಮಿ ಸೇರಿದಂತೆ ವಿವಿಧ ವಿವಾದ ಗಳಿರುವ ಸ್ಥಳಗಳಲ್ಲಿ ವಿಳಂಬವಾಗಬಹುದು ಎಂದು ತಿಳಿಸಿದರು.

ಭಟ್ಕಳದಲ್ಲಿ ನಾಲ್ಕು ಪಥದ ಹೆದ್ದಾರಿ ಕಾಮಗಾರಿ 2013ರಲ್ಲಿ ಆರಂಭಗೊಂಡಿದ್ದು, 2019ರೊಳಗೆ ಪೂರ್ಣಗೊಳ್ಳ ಬೇಕಿತ್ತು. ಹಲವು ಕಾರಣಗಳಿಂದ ವಿಳಂಬವಾಗಿರುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಅಕ್ಟೋಬರ್ ಅಂತ್ಯವನ್ನು ಗಡುವಾಗಿ ನಿಗದಿಪಡಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡು ಸಂಚಾರ ದಟ್ಟಣೆ ಕಡಿಮೆಯಾಗು ವುದೇ ಎಂಬುದನ್ನು ಸಾರ್ವಜನಿಕರು ನಿರೀಕ್ಷಿಸುತ್ತಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor