ಮೋದಿ ಸರಕಾರ ಹೇಳುತ್ತಿರುವುದೇನು?, ತಳಮಟ್ಟದ ವಾಸ್ತವವೇನು?

Update: 2024-04-16 03:49 GMT
Editor : Ismail | Byline : ಆರ್.ಜೀವಿ

ಚುನಾವಣೆಯಲ್ಲಿ ಮತದಾರರು ಯಾವ ವಿಚಾರಕ್ಕೆ ಆದ್ಯತೆ ಕೊಡಲಿದ್ದಾರೆ ಎಂಬುದು ಸಹಜವಾಗಿಯೇ ಮುಖ್ಯ ಪ್ರಶ್ನೆಯಾಗುತ್ತದೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರ ಮೂರನೇ ಅವಧಿಗೆ ಅಧಿಕಾರಕ್ಕೇರಲು ನೋಡುತ್ತಿದೆ. ಮೂರನೇ ಅತಿ ದೊಡ್ಡ ಆರ್ಥಿಕತೆ, ವಿಶ್ವಗುರು, ಹಿಂದುತ್ವ ಮೊದಲಾದ ಕಥೆಗಳನ್ನೆಲ್ಲ ಅದು ಜನರೆದುರು ಇಡುತ್ತಿದೆ. ಹಾಗಾದರೆ ಈ ಬಾರಿಯ ನಿಜವಾದ ಚುನಾವಣಾ ವಿಷಯ ಯಾವುದು? ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಚುನಾವಣಾ ಪ್ರಚಾರ ಭಾಷಣಗಳಿಗೂ ವಾಸ್ತವಕ್ಕೂ ಇರುವ ಅಂತರವೇನು?

ದೇಶಾದ್ಯಂತ ಈಗ ಚುನಾವಣಾ ಪ್ರಚಾರದ ಭರಾಟೆ. ಭಾಷಣಗಳು, ಸಂದರ್ಶನಗಳು, ಪತ್ರಿಕಾಗೋಷ್ಠಿಗಳು, ಸೋಷಿಯಲ್ ಮೀಡಿಯಾ ಪೋಸ್ಟ್ಗಳು, ವಾಟ್ಸ್ಆ್ಯಪ್ ಸಂದೇಶಗಳು - ಇವೆಲ್ಲವುಗಳ ಅಬ್ಬರ ನಮ್ಮನ್ನು ಆವರಿಸಿದೆ. ಅದರಲ್ಲೂ ಪ್ರಧಾನಿ ಮೋದಿ ಹಾಗೂ ಆಡಳಿತಾರೂಢ ಬಿಜೆಪಿಯ ಸ್ಟಾರ್ ಪ್ರಚಾರಕರು ನಮ್ಮ ಟಿವಿ ಹಾಗೂ ಮೊಬೈಲ್ ಸ್ಕ್ರೀನ್ಗಳನ್ನೂ ಸಂಪೂರ್ಣ ಆಕ್ರಮಿಸಿಕೊಂಡು ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಮಾತುಗಳಲ್ಲಿ ಮದರ್ ಆಫ್ ಡೆಮಾಕ್ರಸಿ, ವಿಶ್ವಗುರು, ಜಾಗತಿಕ ಮನ್ನಣೆ, ರಾಮ ಮಂದಿರ, ಹಿಂದುತ್ವ ಅಸ್ಮಿತೆ, ಸಿಎಎ, ಸಮಾನ ನಾಗರಿಕ ಸಂಹಿತೆ, ಹಿಂದೂ-ಮುಸ್ಲಿಮ್ ಇವುಗಳದ್ದೇ ಕಾರುಬಾರು.

ಆದರೆ ಈ ಪ್ರಚಾರದ ಭರಾಟೆಯಲ್ಲಿ ಅವರು ಹೇಳುತ್ತಿರುವುದಕ್ಕೂ ತಳಮಟ್ಟದಲ್ಲಿ ಇರುವ ವಾಸ್ತವಕ್ಕೂ ಸಂಬಂಧ ಇದೆಯೇ ?

ಸಿಎಸ್ಡಿಎಸ್ -ಲೋಕನೀತಿ ನಡೆಸಿದ ಚುನಾವವಣಾ ಪೂರ್ವ ಸಮೀಕ್ಷೆ ಹಲವು ಸತ್ಯಗಳನ್ನು ಬಿಚ್ಚಿಟ್ಟಿದೆ. ಉದ್ಯೋಗಾವಕಾಶಗಳು ತೀರಾ ಕಡಿಮೆಯಾಗಿರುವುದು, ಗಗನಮುಖಿಯಾಗಿರುವ ಬೆಲೆಗಳು, ಹೆಚ್ಚುತ್ತಿರುವ ಭ್ರಷ್ಟಾಚಾರ, ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟಗಳು ಮತ್ತು ಕುಟುಂಬಗಳ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ - ಇವೆಲ್ಲ ವಿಚಾರಗಳೂ ಈ ಚುನಾವಣೆಯ ಹೊತ್ತಿನಲ್ಲಿ ಜನರನ್ನು ಕಾಡುತ್ತಿವೆ.

ಮೂರನೇ ಅತಿದೊಡ್ಡ ಆರ್ಥಿಕತೆ ಎಂದೆಲ್ಲ ಮೋದಿ ಸರಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ, ದೇಶದ ಆರ್ಥಿಕತೆ ಸುಧಾರಿಸಿದೆ ಎಂದು ಅದು ಎಷ್ಟೆಲ್ಲ ಮಾತಾಡುತ್ತಿದ್ದರೂ, ವಾಸ್ತವವಾಗಿ ಆರ್ಥಿಕ ಸಂಕಷ್ಟಗಳನ್ನು ಕಂಡವರು ಅದಾವುದನ್ನೂ ನಂಬುವ ಸ್ಥಿತಿಯಲ್ಲಂತೂ ಇಲ್ಲ. ಬಡವರು, ಕೆಳಮಧ್ಯಮ ವರ್ಗದವರು ಮತ್ತು ಶ್ರೀಮಂತರು ಈ ಆರ್ಥಿಕ ವರ್ಗಗಳ ನಡುವಿನ ಅಂತರ ಕೂಡ ಅಗಾಧವಾಗುತ್ತಿರುವುದರ ಬಗೆಗಿನ ಅಭಿಪ್ರಾಯಗಳು ಸಮೀಕ್ಷೆಯಲ್ಲಿ ಖಚಿತವಾಗಿ ವ್ಯಕ್ತವಾಗಿವೆ.

ಬಡವರು ಮತ್ತು ಕೆಳಮಧ್ಯಮ ವರ್ಗದವರು ತಮ್ಮ ಬದುಕು ದುಸ್ತರವಾಗಿರುವುದನ್ನು ತಿಳಿದಿದ್ದಾರೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ಈ ಚುನಾವಣೆಯಲ್ಲಿ ಮತದಾರರ ಆದ್ಯತೆಯ ವಿಷಯಗಳಾಗಿವೆ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಮತದಾರರ ಆದ್ಯತೆಗಳಲ್ಲಿ ಕಾಣಿಸಿರುವ ದೊಡ್ಡ ಬದಲಾವಣೆ ಇದು.

ನಿರುದ್ಯೋಗ ಮತ್ತು ಬೆಲೆ ಏರಿಕೆ ಬಹುಪಾಲು ಜನರ ಕಳಕಳಿಯ ವಿಚಾರವಾಗಿದೆ. ಕಳೆದ ಐದು ವರ್ಷಗಳಲ್ಲಿ ಎಲ್ಲಾ ಹಂತಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂಬ ವಿಚಾರದಲ್ಲಿ ಎಲ್ಲರದೂ ಒಂದೇ ಬಗೆಯ ಅಭಿಪ್ರಾಯ. ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಎರಡು ಸಮಸ್ಯೆಗಳ ನಡುವಿನ ಪರಸ್ಪರ ಸಂಬಂಧಗಳು ಕೂಡ ಬಹಳ ಮುಖ್ಯ. ಉದ್ಯೋಗ ಮೊದಲೇ ಇಲ್ಲ. ಇದ್ದರೂ ಸಣ್ಣ ಸಂಬಳಕ್ಕೆ ದುಡಿಯಬೇಕಾದ ಸ್ಥಿತಿ. ಆದಾಯ ಇಲ್ಲ. ಅಂಥದ್ದರ ನಡುವೆಯೇ ಬೆಲೆಯೇರಿಕೆಯ ಬರೆ. ಇದು ಜನರ ಜೀವನಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರಿದೆ.


 



ಮೊದಲನೆಯದಾಗಿ, ದೇಶದಲ್ಲಿ ಉದ್ಯೋಗದ ಪರಿಸ್ಥಿತಿ ಬಹಳ ನಿರಾಶಾದಾಯಕವಾಗಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.62ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯುವುದು ಈಗ ಹೆಚ್ಚು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಶೇ.62ರಷ್ಟು ಮಂದಿ ಉದ್ಯೋಗ ಸಿಗಲಾರದ ಸ್ಥಿತಿಯ ಬಗ್ಗೆ ಹೇಳಿದ್ದಾರೆ. ನಗರ ಪ್ರದೇಶಗಳ ಶೇ.65ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲಸ ಸಿಗುವುದು ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ಪುರುಷರಲ್ಲಿ ಹೆಚ್ಚಿನವರಿಂದ, ಅಂದರೆ ಶೇ.65ರಷ್ಟು ಜನರಿಂದ ವ್ಯಕ್ತವಾಗಿದೆ. ಮಹಿಳೆಯರಲ್ಲಿ ಈ ಪ್ರಮಾಣ ಶೇ.59ರಷ್ಟಿದೆ. ಉದ್ಯೋಗ ಸಿಗುವುದು ಬಹಳ ಕಷ್ಟವಾಗುತ್ತಿದೆ ಎಂದು ಶೇ.67ರಷ್ಟು ಮುಸ್ಲಿಮರು ಹೇಳುತ್ತಿದ್ದಾರೆ. ಹಿಂದೂ ಒಬಿಸಿಗಳಲ್ಲಿ ಶೇ.63ರಷ್ಟು ಮಂದಿ ಈ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಶೇ.59ರಷ್ಟು ಪರಿಶಿಷ್ಟ ವರ್ಗಗಳ ಜನರು ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ಹಿಂದೂ ಮೇಲ್ವರ್ಗದವರಲ್ಲೂ ಈ ಕಷ್ಟದ ಬಗ್ಗೆ ಹೇಳಿಕೊಳ್ಳುತ್ತಿರುವವರು ಶೇ.57ರಷ್ಟು.

ಹಾಗೆಯೇ, ಐದು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಬೆಲೆ ಏರಿಕೆ ತೀವ್ರವಾಗಿರುವ ಬಗ್ಗೆ ಮೂರನೇ ಎರಡರಷ್ಟು ಜನರು ಹೇಳಿದ್ದಾರೆ. ಬೆಲೆಗಳು ಗಣನೀಯವಾಗಿ ಹೆಚ್ಚಾಗಿದೆ ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.71ರಷ್ಟು ಜನರು ಹೇಳಿದ್ದಾರೆ. ಬೆಲೆ ಏರಿಕೆ ಕುಟುಂಬಗಳ ದೈನಂದಿನ ಆರ್ಥಿಕ ಸಮತೋಲನವನ್ನೇ ಕದಡಿದೆ. ಬೆಲೆ ಏರಿಕೆ ಎಲ್ಲಾ ಆರ್ಥಿಕ ವರ್ಗಗಳ ಮೇಲೆ ಪರಿಣಾಮ ಬೀರಿದ್ದರೂ, ಬಡವರು, ಕಡಿಮೆ ಆದಾಯವುಳ್ಳವರು ಮತ್ತು ಅಂಚಿನಲ್ಲಿರುವ ಗ್ರಾಮೀಣ ಸಮುದಾಯಗಳು ಬೆಲೆ ಏರಿಕೆಯಿಂದ ಹೆಚ್ಚು ಹೈರಾಣಾಗಿದ್ದಾರೆ. ನಗರವಾಸಿಗಳು ಮತ್ತು ಮಧ್ಯಮ ಮತ್ತು ಮೇಲ್ವರ್ಗದವರಿಗಿಂತ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರು ಈ ವಿಚಾರವನ್ನು ಹೆಚ್ಚು ತೀಕ್ಷ್ಣವಾಗಿ ಎತ್ತಿ ಹೇಳುತ್ತಾರೆ. ಬಡವರಲ್ಲಿ ಶೇ.76ರಷ್ಟು ಮಂದಿ ಬೆಲೆಯೇರಿಕೆ ತೀವ್ರವಾಗಿರುವ ಬಗ್ಗೆ ಹೇಳಿದ್ದಾರೆ. ಕೆಳ ವರ್ಗದವರಲ್ಲಿ ಶೇ.70ರಷ್ಟು ಮಂದಿಯನ್ನು ಬೆಲೆಯೇರಿಕೆ ಕಾಡಿದೆ. ಮಧ್ಯಮ ವರ್ಗದವರಲ್ಲಿ ಶೇ.66ರಷ್ಟು ಮಂದಿ ಬೆಲೆಯೇರಿಕೆ ಬಾಧಿಸುತ್ತಿರುವ ಬಗ್ಗೆ ಹೇಳಿದ್ದಾರೆ. ಇನ್ನು ಗ್ರಾಮೀಣ ಭಾಗದವರಲ್ಲಿ ಬೆಲೆಯೇರಿಕೆಯ ಕಷ್ಟದ ಬಗ್ಗೆ ಹೇಳಿರುವವರು ಶೇ.72ರಷ್ಟು ಜನರು. ಪಟ್ಟಣ ಪ್ರದೇಶದವರು ಶೇ.69ರಷ್ಟು ಜನರು. ನಗರ ಪ್ರದೇಶದ ಶೇ.66ರಷ್ಟು ಮಂದಿ ಬೆಲೆಯೇರಿಕೆ ತೀವ್ರವಾಗಿರುವುದರ ಬಗ್ಗೆ ಹೇಳಿದ್ದಾರೆ. ಬೆಲೆಏರಿಕೆ ಬಗ್ಗೆ ಶೇ.76ರಷ್ಟು ಮುಸ್ಲಿಮರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿಯವರಲ್ಲಿ ಈ ಪ್ರಮಾಣ ಶೇ.75ರಷ್ಟಿದೆ. ಹಿಂದೂ ಒಬಿಸಿಗಳಲ್ಲಿ ಶೇ.69ರಷ್ಟು ಮಂದಿ ಬೆಲೆ ಏರಿಕೆ ತಿವ್ರತೆ ಬಗ್ಗೆ ಹೇಳಿದ್ದಾರೆ. ಹಿಂದೂ ಮೇಲ್ವರ್ಗದ ಶೇ.68ರಷ್ಟು ಮಂದಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ. ಬೆಲೆ ಏರಿಕೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಯಾವುದು ಹೊಣೆ ಎಂಬ ಪ್ರಶ್ನೆಗೆ ಹೆಚ್ಚಿನವರು ಕೇಂದ್ರ ಸರಕಾರದ ಕಡೆಗೆ ಬೆರಳು ಮಾಡಿದ್ದಾರೆ. ಕೇಂದ್ರ ಸರಕಾರವೇ ಹೊಣೆ ಎನ್ನುವವರು ಶೇ.26ರಷ್ಟಿದ್ದರೆ, ರಾಜ್ಯ ಸರಕಾರಗಳು ಕಾರಣ ಎನ್ನುವವರು ಶೇ.12ರಷ್ಟು ಜನರು. ಬಡವರು ಮತ್ತು ಕೆಳವರ್ಗದವರಲ್ಲಿ ಜೀವನಮಟ್ಟ ಕುಸಿದಿದೆ. ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಬಹಳ ಕಷ್ಟವಾಗಿದೆ ಎಂಬ ಅಭಿಪ್ರಾಯವನ್ನು ಬಡವರಲ್ಲಿ ಅರ್ಧದಷ್ಟು ಮಂದಿ ವ್ಯಕ್ತಪಡಿಸಿದ್ದಾರೆ. ಜೀವನಮಟ್ಟ ಸುಧಾರಣೆಯಾಗಿದೆ ಎಂದು ಭಾವಿಸುವವರ ಪ್ರಮಾಣ ಬಡವರಲ್ಲಿ ಕಡಿಮೆಯಾಗಿದ್ದು, ಅದು ಮೂರನೇ ಒಂದರಷ್ಟಿದೆ.

ಅಭಿವೃದ್ಧಿಯ ವಿಚಾರದಲ್ಲಿ ಮೋದಿ ಸರಕಾರ ಮತದಾರರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆಯೇ ಎಂಬುದು ಪ್ರಶ್ನೆ. ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವಾಗ ಅಭಿವೃದ್ಧಿ ವಿಚಾರ ಯಾವತ್ತೂ ಮುಖ್ಯವಾಗುತ್ತಲೇ ಬಂದಿದೆ. 2014ರಲ್ಲಿ 10 ಮತದಾರರಲ್ಲಿ ಇಬ್ಬರು ದೇಶದ ಅಭಿವೃದ್ಧಿ ವಿಚಾರವನ್ನು ಮತದಾನದ ವೇಳೆ ಮುಖ್ಯವಾಗಿ ತೆಗೆದುಕೊಂಡಿದ್ದರು. ಅಭಿವೃದ್ಧಿ ವಿಚಾರದಲ್ಲಿ ಜನರಲ್ಲಿ ಮೂಡಿದ್ದ ಹತಾಶ ಭಾವನೆಯನ್ನೇ ಆಗ ಬಿಜೆಪಿ ತನ್ನ ಲಾಭಕ್ಕೆ ಬಳಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರ ಕಳೆದುಕೊಳ್ಳಬೇಕಾಯಿತು. ಆ ಚುನಾವಣೆಯಲ್ಲಿ ಶೇ.30ರಷ್ಟು ಮತದಾರರು ಮೋದಿ ದೇಶದ ಅಭಿವೃದ್ಧಿಗೆ ಉತ್ತಮ ಎಂದು ಭಾವಿಸಿದ್ದರು. ಬಿಜೆಪಿ ನೇತೃತ್ವದ ಎನ್ಡಿಎಯನ್ನು ಎರಡನೇ ಅವಧಿಗೆ ಅಧಿಕಾರಕ್ಕೆ ತಂದ 2019ರ ಚುನಾವಣೆಯಲ್ಲಿ ಶೇ.14ರಷ್ಟು ಮತದಾರರು ಅಭಿವೃದ್ಧಿ ವಿಚಾರವನ್ನು ಮುಖ್ಯವಾಗಿ ಪರಿಗಣಿಸಿದ್ದರು.

ಹಾಗಾದರೆ ಈಗ, ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ನೋಡುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಭಿವೃದ್ಧಿ ಕುರಿತ ಮತದಾರರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆಯೇ? ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂದು ಬಿಜೆಪಿ ಸರಕಾರ ಹೇಳುತ್ತಿರುವುದು ಮಾತಿನಲ್ಲಿ ಮಾತ್ರವೇ ಅಥವಾ ನಿಜವಾಗಿಯೂ ಅದು ದೇಶದ ಎಲ್ಲರನ್ನೂ ಮುಟ್ಟಿದೆಯೆ? ಸಮೀಕ್ಷೆ ಪ್ರಕಾರ, ಸುಮಾರು 10 ಮತದಾರರಲ್ಲಿ ಇಬ್ಬರು ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ.32ರಷ್ಟು ಜನರು ಕಳೆದ ಐದು ವರ್ಷಗಳಲ್ಲಿ ಕೇವಲ ಶ್ರೀಮಂತರ ಅಭಿವೃದ್ಧಿಯಾಗಿದೆ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ನೇತೃತ್ವದಲ್ಲಿನ ಬಿಜೆಪಿ ಸರಕಾರದ ಅವಧಿಯ ಬಗ್ಗೆಯೂ ಜನರು ಇಂಥದೇ ಭಾವನೆ ಹೊಂದಿದ್ದರು ಮತ್ತು ಶ್ರೀಮಂತರ ಅಭಿವೃದ್ಧಿ ಮಾತ್ರ ಆಗಿದೆ ಎಂದು ಆಗ ಇನ್ನೂ ಹೆಚ್ಚು ಜನರು ಅಂದರೆ, ಶೇ.43ರಷ್ಟು ಮಂದಿ ಭಾವಿಸಿದ್ದರು ಎಂಬುದು ಕುತೂಹಲಕಾರಿ ಸಂಗತಿ.

2019ಕ್ಕೆ ಹೋಲಿಸಿದರೆ ಅಭಿವೃದ್ಧಿ ಎಲ್ಲರಿಗೂ ಸಮಾನವಾಗಿ ಆಗಿದೆ ಎಂದು ಕೆಲವರಾದರೂ ಭಾವಿಸುತ್ತಿದ್ಧಾರೆ. ಆದರೆ ಅಂಥವರ ಪ್ರಮಾಣ ಶೇ.48ನ್ನು ದಾಟಿಲ್ಲ. ಇನ್ನು ಯಾವ ವರ್ಗದವರು ಯಾವ ರೀತಿಯಲ್ಲಿ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದನ್ನು ನೋಡುವುದಾದರೆ, ಎಲ್ಲರ ಅಭಿವೃದ್ಧಿಯಾಗಿದೆ ಎಂದು ಭಾವಿಸುವವರು ಮೇಲ್ವರ್ಗ ಮತ್ತು ಮಧ್ಯಮ ವರ್ಗದವರಲ್ಲಿ ಹೆಚ್ಚಿದ್ದಾರೆ. ಅವರ ಪ್ರಮಾಣ ಕ್ರಮವಾಗಿ ಶೇ.55 ಮತ್ತು ಶೇ.50ರಷ್ಟಿದೆ. ಬಡ ವರ್ಗದವರಲ್ಲಿ ಹತ್ತರಲ್ಲಿ ನಾಲ್ವರು ಎಲ್ಲರಿಗೂ ಅಭಿವೃದ್ಧಿಯಾಗಿದೆ ಎಂದು ಭಾವಿಸುತ್ತಾರೆ. ಒಂದಂತೂ ಸ್ಪಷ್ಟ. ಅಭಿವೃದ್ಧಿ ಎನ್ನುವುದು ಶ್ರೀಮಂತರ ಪಾಲಿಗೆ ಮಾತ್ರ ದಕ್ಕಿದೆ ಎಂದೇ ಮೂರನೇ ಒಂದು ಭಾಗದಷ್ಟು ಮತದಾರರು ಅಭಿಪ್ರಾಯಪಡುತ್ತಾರೆ.

ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದೇ ಹೇಳಿದ್ದಾರೆ. ಅವರಲ್ಲಿ ಹೆಚ್ಚಿನವರು ಭ್ರಷ್ಟಾಚಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಕಾರಣ ಎಂದೂ ಹೇಳಿರುವುದು ಗಮನಾರ್ಹ. ಹಾಗೆ ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿರುವವರು ಶೇ.55ರಷ್ಟು ಮಂದಿ. 2019ರಲ್ಲಿನ ಸಮೀಕ್ಷೆಗೆ ಹೋಲಿಸಿದಲ್ಲಿ ಈ ಪ್ರಮಾಣ ಗಮನಾರ್ಹವಾಗಿ ಸುಮಾರು ಶೇ.15ರಷ್ಟು ಹೆಚ್ಚು. ಇನ್ನು, ಭ್ರಷ್ಟಾಚಾರ ಕಡಿಮೆಯಾಗಿದೆ ಎನ್ನುವವರ ಪ್ರಮಾಣ ತೀರಾ ಕಡಿಮೆಯಾಗಿದೆ. 2019ರ ಸಮೀಕ್ಷೆಯ ವೇಳೆ ಶೇ.37ರಷ್ಟು ಮಂದಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದಿದ್ದರು. ಈಗ ಅವರ ಪ್ರಮಾಣ ಅರ್ಧದಷ್ಟು ಕುಸಿದಿದ್ದು. ಶೇ.19ರಷ್ಟು ಜನರು ಮಾತ್ರವೇ ಅಂಥ ಭಾವನೆ ವ್ಯಕ್ತಪಡಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಭ್ರಷ್ಟಾಚಾರ ವಿಚಾರವಾಗಿ ಎಲ್ಲೆಡೆಯ ಜನರೂ ಒಂದೇ ಬಗೆಯ ಭಾವನೆ ವ್ಯಕ್ತಪಡಿಸಿದ್ದಾರೆ ಎಂಬುದು. ಗ್ರಾಮ, ಪಟ್ಟಣ ಮತ್ತು ನಗರ ಹೀಗೆ ಎಲ್ಲೆಡೆಯ ಜನರೂ ಭ್ರಷ್ಟಾಚಾರ ಹೆಚ್ಚಿದೆ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿಲ್ಲ. ಎಲ್ಲರೂ ಭ್ರಷ್ಟಾಚಾರ ಹೆಚ್ಚಿದೆ ಎಂದು ಹೇಳುತ್ತಿದ್ದಾರೆಯೇ ಹೊರತು, ಕಡಿಮೆಯಾಗಿದೆ ಎನ್ನುವವರ ಸಂಖ್ಯೆ ತೀರಾ ಕಡಿಮೆ. ಇನ್ನೊಂದು ನೆಲೆಯಿಂದ ನೋಡಿದಾಗಲೂ ಜನರು ಈ ವಿಚಾರದಲ್ಲಿ ನಿಖರ ಆಭಿಪ್ರಾಯ ಹೊಂದಿರುವುದು ಸ್ಪಷ್ಟವಾಗುತ್ತದೆ. ಅದೆಂದರೆ, ಭ್ರಷ್ಟಾಚಾರ ಹೆಚ್ಚಿದೆ ಎಂದು ಬಡವರು, ಶ್ರೀಮಂತರೆನ್ನದೆ ಎಲ್ಲರೂ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಪ್ರತೀ 10ರಲ್ಲಿ ಆರು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಹೇಳುವವರ ಪ್ರಮಾಣ ತುಂಬಾ ಕಡಿಮೆಯಿದ್ದರೂ, ಇಲ್ಲೊಂದು ಸಣ್ಣ ಸೂಕ್ಷ್ಮವನ್ನು ಗಮನಿಸಬಹುದಾಗಿದೆ. ಏನೆಂದರೆ, ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಹೇಳುತ್ತಿರುವವರಲ್ಲಿ ಬಡವರಿಗಿಂತಲೂ ಶ್ರೀಮಂತರೇ ಹೆಚ್ಚು. ಬಡವರಲ್ಲಿ ಶೇ.16ರಷ್ಟು ಮಂದಿ ಭ್ರಷ್ಟಾಚಾರ ಕಡಿಮೆ ಎಂದಿದ್ದರೆ, ಶ್ರೀಮಂತರಲ್ಲಿ ಹಾಗೆ ಅಭಿಪ್ರಾಯ ಪಡುತ್ತಿರುವವರು ಶೇ.23ರಷ್ಟಿದ್ದಾರೆ. ಇನ್ನು ಭ್ರಷ್ಟಾಚಾರ ಹೆಚ್ಚಳಕ್ಕೆ ಯಾರು ಕಾರಣ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು, ಅಂದರೆ ಶೇ.56ರಷ್ಟು ಜನರು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಅದಕ್ಕೆ ಹೊಣೆ ಎಂದಿದ್ದಾರೆ. ಅದರಲ್ಲೂ ಕೇಂದ್ರ ಸರಕಾರವೇ ಹೊಣೆ ಎಂದವರ ಪ್ರಮಾಣ ಹೆಚ್ಚು. ಶೇ.25ರಷ್ಟು ಜನರು, ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕೇಂದ್ರ ಸರಕಾರವೇ ಕಾರಣ ಎಂದಿದ್ದಾರೆ. ರಾಜ್ಯ ಸರಕಾರಗಳ ಕಡೆಗೂ ಬೆರಳು ಮಾಡಿರುವವರ ಪ್ರಮಾಣ ಶೇ.16ರಷ್ಟಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂಬ ಭಾವನೆ ಮತದಾರರಲ್ಲಿ ಜಾಸ್ತಿಯಾಗಿದೆ.

ವಿವಿಧ ಆರ್ಥಿಕ ವರ್ಗಗಳ ಜನರ ನಡುವೆ ಈ ವಿಚಾರದಲ್ಲಿ ಭಿನ್ನ ಭಾವನೆಯಿಲ್ಲ ಎಂಬುದು ಗಮನಿಸಬೇಕಿರುವ ಸಂಗತಿ. ಅಂದರೆ, ಭ್ರಷ್ಟಾಚಾರ ಹೆಚ್ಚಿದೆ ಎಂಬುದೇ ಬಹುತೇಕ ಎಲ್ಲರ ಅಭಿಪ್ರಾಯವಾಗಿದೆ. ಮತದಾನದ ಮೇಲೆ ಈ ಭಾವನೆ ಯಾವ ಬಗೆಯ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಅರ್ಧದಷ್ಟು ಜನರು ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಚಾರಗಳೇ ಪ್ರಮುಖ ಚುನಾವಣಾ ವಿಷಯಗಳೆಂಬುದನ್ನು ಹೇಳಿದ್ದಾರೆ. 2019ರ ಸಮೀಕ್ಷೆಯಲ್ಲಿ ಈ ವಿಚಾರದ ಬಗ್ಗೆ ಆರನೇ ಒಂದು ಭಾಗದಷ್ಟು ಜನರು ಮಾತ್ರ ಆದ್ಯತೆ ಕೊಟ್ಟಿದ್ದರು. ಇನ್ನು ನಾಲ್ಕನೇ ಒಂದು ಭಾಗದಷ್ಟು ಜನರು ಅಭಿವೃದ್ಧಿ ಮತ್ತು ಭ್ರಷ್ಟಾಚಾರ ವಿಚಾರಕ್ಕೆ ಒತ್ತುಕೊಟ್ಟಿದ್ದಾರೆ. 2019ರ ಸಮೀಕ್ಷೆಗೆ ಹೋಲಿಸಿದರೂ ಈ ಪ್ರಮಾಣದಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವೇನಿಲ್ಲ.

ಇದೆಲ್ಲದರ ನಡುವೆಯೂ, ಹೆಚ್ಚುತ್ತಿರುವ ಅಸಮಾನತೆ ವಿಚಾರ ಚುನಾವಣೆಯ ವಿಷಯವಾಗಿ ರೂಪುಗೊಳ್ಳಲಾರದ ಬಗ್ಗೆಯೂ ಚರ್ಚೆಗಳಿವೆ. ಆರ್ಥಿಕ ಸ್ತರದಲ್ಲಿ ಮೇಲಿರುವ ಶೇ.1ರಷ್ಟು ಮಂದಿಯ ವಾರ್ಷಿಕ ಗಳಿಕೆ 53 ಲಕ್ಷ ರೂ. ಆಗಿದ್ದು, ಇದು ಸರಾಸರಿ ಭಾರತೀಯರ ಗಳಿಕೆಯ 23 ಪಟ್ಟು ಹೆಚ್ಚು. ಇದೇ ವೇಳೆ ಕೆಳಹಂತದ ಶೇ.50ರಷ್ಟು ಮಂದಿಯ ವಾರ್ಷಿಕ ಸರಾಸರಿ ಆದಾಯ ರೂ. 71,000ಕ್ಕೆ ಹಾಗೂ ಮಧ್ಯಮ ಹಂತದ ಶೇ.40ರಷ್ಟು ಜನರ ವಾರ್ಷಿಕ ಸರಾಸರಿ ಆದಾಯ ರೂ. 1,65,000 ರೂ.ಗಳಿಗೆ ನಿಲ್ಲುತ್ತದೆ. ಇನ್ನು ಅಗ್ರಸ್ಥಾನದಲ್ಲಿರುವ ಅತಿ ಶ್ರೀಮಂತ 10 ಸಾವಿರ ವ್ಯಕ್ತಿಗಳ ವಾರ್ಷಿಕ ಸರಾಸರಿ ಗಳಿಕೆ 48 ಕೋಟಿ. ಇದು ಸರಾಸರಿ ಭಾರತೀಯರ ಗಳಿಕೆಯ 2,069 ಪಟ್ಟು ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ. 2019-2021ರ ಎನ್ಎಫ್ಎಚ್ಎಸ್-5ರ ವರದಿ ಪ್ರಕಾರ, ಶೇ.7.5ರಷ್ಟು ಕುಟುಂಬಗಳು ಮಾತ್ರವೇ ಕಾರುಗಳನ್ನು ಹೊಂದಿವೆ. ಇದೆಲ್ಲವೂ ಹೌದಾದರೂ, ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳ ಹಂತದಲ್ಲಿರುವವರು ಈ ಅಸಮಾನತೆಯನ್ನು ತಮ್ಮ ಹಣೆಬರಹ ಎಂದು ಭಾವಿಸಿರುವುದೇ ಹೆಚ್ಚು ಎಂಬ ವಾದವಿದೆ. ಹೆಚ್ಚಿನವರಂತೂ ಬಿಜೆಪಿ ಸರಕಾರದ ಅಚ್ಛೇ ದಿನ್ ಭ್ರಮೆಯಿಂದ ಹೊರಬಂದಿಲ್ಲ.

ಇದೆಲ್ಲ ಏನೇ ಇದ್ದರೂ, ದೇಶದ ಬಹುಪಾಲು ಜನರ ಮುಖ್ಯ ಪ್ರಶ್ನೆಯಾಗಿರುವುದು ನಿರುದ್ಯೋಗ ಮತ್ತು ಬೆಲೆಯೇರಿಕೆ ವಿಚಾರ. ಯಾವುದನ್ನು ಮೋದಿ ದೊಡ್ಡದು ಎಂದು ಪ್ರತಿಪಾದಿಸಲು ಯತ್ನಿಸುತ್ತಿದ್ದಾರೋ ಆ ರಾಮಮಂದಿರ ಮತ್ತು ಹಿಂದುತ್ವದ ವಿಚಾರ ಜನರ ದೃಷ್ಟಿಯಲ್ಲಿ ಲೆಕ್ಕಕ್ಕೇ ಇಲ್ಲ ಎಂಬುದನ್ನು ಸರ್ವೇ ಹೇಳುತ್ತಿದೆ. ಸರ್ವೇಯಲ್ಲಿ ಪಾಲ್ಗೊಂಡಿದ್ದ ಶೇ.8ರಷ್ಟು ಮಂದಿ ಮಾತ್ರ ರಾಮಮಂದಿರ ವಿಚಾರಕ್ಕೆ ಗಮನ ಕೊಟ್ಟಿದ್ಧಾರೆ. ಶೇ.2ರಷ್ಟು ಮಂದಿ ಮಾತ್ರ ಹಿಂದುತ್ವ ವಿಚಾರಕ್ಕೆ ಗಮನ ಕೊಟ್ಟಿದ್ದಾರೆ. ಇನ್ನು, ವಿಶ್ವದ ತುಂಬ ಭಾರತವನ್ನು ಹೊಗಳಲಾಗುತ್ತಿದೆ ಎಂದು ಮೋದಿ ಹೇಳಿಕೊಳ್ಳುತ್ತಿರುವುದರ ಬಗ್ಗೆ ಕೂಡ ಶೇ.2ರಷ್ಟು ಮಂದಿ ಮಾತ್ರ ಮಹತ್ವ ಕೊಟ್ಟಿದ್ಧಾರೆ.

ಇದು ಮೋದಿ ಸರಕಾರ ಹೇಳುತ್ತಿರುವುದಕ್ಕೂ. ವಾಸ್ತವಕ್ಕೂ ಇರುವ ಅಜಗಜಾಂತರ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಜೀವಿ

contributor

Similar News