ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಹಿನ್ನೆಲೆಯಲ್ಲಿನ ಹಿಂಬಾಗಿಲ ರಾಜಕಾರಣ

ಬಿಜೆಪಿ ಪಾಲಿಗೆ ಕರ್ನಾಟಕ ದಕ್ಷಿಣ ಭಾರತದಲ್ಲಿ ಅಧಿಕಾರದ ಹೆಬ್ಬಾಗಿಲಾದದ್ದು ಈಗ ಇತಿಹಾಸ. ಹೇಗೆ ಅದು ಅಧಿಕಾರಕ್ಕೆ ಏರಿತು ಎಂಬುದಕ್ಕಿಂತ ಹೆಚ್ಚಾಗಿ ಅದು ಈ ಅವಕಾಶವನ್ನು ತನ್ನ ಪ್ರಭಾವ ಬೆಳೆಸಿಕೊಳ್ಳಲು ಬಳಸಿತು. ಆದರೆ ನಿಜವಾಗಿಯೂ ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದೆಯೆ? ಅದು ಇಂದು ಬೆಳೆದಿರುವಂತೆ ಕಾಣಿಸುವಲ್ಲಿ ಇತರ ಪಕ್ಷಗಳ ಪಾಲೆಷ್ಟು? ಈಚಿನ ಬೆಳವಣಿಗೆಗಳು ಬಿಜೆಪಿ ಮನಃಸ್ಥಿತಿಯ ಕರಾಳತೆ ತೀವ್ರವಾಗಿ ಆವರಿಸಿಕೊಳ್ಳುತ್ತಿರುವುದರ ಸೂಚನೆಗಳಾಗಿವೆಯೆ?

Update: 2024-03-05 06:44 GMT
Editor : Thouheed | Byline : ಆರ್.ಜೀವಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊನ್ನೆ ಒಂದು ಮಾತು ಹೇಳಿದರು. ಅದು ಅವರು ಮತ್ತೆ ಮತ್ತೆ ಹೇಳುತ್ತಲೇ ಬಂದಿರುವ ವಿಚಾರವೂ ಹೌದು.

ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದು ಹೀಗೆ: ರಾಜ್ಯದಲ್ಲಿ ಆಪರೇಶನ್ ಕಮಲ ಆರಂಭಿಸಿದ್ದೇ ಬಿ.ಎಸ್. ಯಡಿಯೂರಪ್ಪನವರು. ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿಲ್ಲ. 2008ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು. ನಂತರ 2018ರಲ್ಲಿಯೂ, ಅಧಿಕಾರದಲ್ಲಿದ್ದ ಸಮ್ಮಿಶ್ರ ಸರಕಾರದ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. ಇದುವರೆಗೆ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಜನಾಶೀರ್ವಾದದೊಂದಿಗೆ ಮುಂಬಾಗಿಲಿಂದ ಬಂದು ಅಧಿಕಾರ ನಡೆಸಿಲ್ಲ.

ಸಿದ್ದರಾಮಯ್ಯನವರ ಈ ಮಾತು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿನ ಒಂದು ಕಹಿಸತ್ಯ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲಾದದ್ದು ಕರ್ನಾಟಕ ಎನ್ನುವಾಗ ಈ ಸತ್ಯವನ್ನು ಮರೆಯುವ ಹಾಗಿಲ್ಲ. ಜನಾಶೀರ್ವಾದವಿಲ್ಲದೆ ಅಧಿಕಾರ ಅನುಭವಿಸಿದ ಪಕ್ಷವೊಂದು ಇಂದು ರಾಜ್ಯದಲ್ಲಿ ಧ್ರುವೀಕರಣ ರಾಜಕೀಯ ಶಕ್ತಿಯಾಗಿ ಬೆಳೆದಿರುವುದು ದೊಡ್ಡ ವಿಪರ್ಯಾಸ.

ಕರ್ನಾಟಕದಲ್ಲಿ ಬಿಜೆಪಿಯ ರಾಜಕೀಯ ಬೆಳವಣಿಗೆ

ಜನಸಂಘ ಎಂದಿದ್ದದ್ದು ಬಿಜೆಪಿಯಾಗಿ ಮರುಹುಟ್ಟು ಪಡೆದದ್ದು 1980ರಲ್ಲಿ. ಹಾಗೆ ಬಿಜೆಪಿಯಾಗಿ ಮರುಹುಟ್ಟು ಪಡೆದ ನಂತರ 1983ರ ಚುನಾವಣೆಯಲ್ಲಿ ಒಮ್ಮೆಲೆ ಅದು 18 ಸೀಟುಗಳನ್ನು ಗೆದ್ದುಬಿಟ್ಟಿತ್ತು. 1985ರ ಚುನಾವಣೆಯಲ್ಲಿ ಮರಳಿ ತನ್ನ ಹಳೇ ಸ್ಥಿತಿಯನ್ನೇ ಮುಟ್ಟಿದ ಅದು ಗೆದ್ದಿದ್ದು 2 ಸ್ಥಾನಗಳನ್ನು ಮಾತ್ರ. ಮತ್ತೆ ಬಿಜೆಪಿಯ ಅದೃಷ್ಟ ಖುಲಾಯಿಸಿದ್ದು 1994ರಲ್ಲಿ. ಆ ಚುನಾವಣೆಯಲ್ಲಿ 40 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತು.

1999ರಲ್ಲಿ ಬಿಜೆಪಿಗೆ ಮತ್ತೆ 44 ಸ್ಥಾನಗಳು ಬಂದವು. 2004ರಲ್ಲಿ 79 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅಧಿಕಾರ ಹಿಡಿಯಲು ಬೇಕಾದ 113 ಸ್ಥಾನಗಳ ಗುರಿ ಬಹಳ ದೂರವಿತ್ತು.

2008ರಲ್ಲಿ 110 ಸ್ಥಾನಗಳಲ್ಲಿ ಗೆದ್ದಿತು. ಅಧಿಕಾರ ಹಿಡಿಯಲು ಬೇಕಿದ್ದ 3 ಸ್ಥಾನಗಳನ್ನು ಹೇಗೋ ತುಂಬಿಸಿಕೊಂಡು ಅಂತೂ ಮೊದಲ ಬಾರಿಗೆ ತನ್ನದೇ ಸರಕಾರವನ್ನು ರಚಿಸಿತು. 2018ರ ಚುನಾವಣೆಯಲ್ಲಿ ಬಿಜೆಪಿಗೆ ಬಂದದ್ದು 104 ಸ್ಥಾನಗಳು. ಆಗ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಒಂದು ವರ್ಷದ ಬಳಿಕ ಉರುಳಿಸಿ 2019ರ ಮಧ್ಯದ ಹೊತ್ತಿಗೆ ಎರಡನೇ ಬಾರಿಗೆ ಬಿಜೆಪಿ ಸರಕಾರ ರಚಿಸಿತು. ದುರಾಡಳಿತದ ಬಳಿಕ 2023ರ ಚುನಾವಣೆಯಲ್ಲಿ 66 ಸ್ಥಾನಗಳನ್ನಷ್ಟೇ ಗೆಲ್ಲುವುದರೊಂದಿಗೆ ಮತ್ತೆ ವಿರೋಧ ಪಕ್ಷವಾಗಿ ಕುಳಿತಿದೆ.

ಇನ್ನು ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಕೂಡ ಮೊದಲ ಬಾರಿಗೆ ಬಿಜೆಪಿ ನೆಲೆ ಕಂಡುಕೊಳ್ಳಲು ಸಾಧ್ಯವಾದದ್ದು 1991ರಲ್ಲಿ. ಆ ಚುನಾವಣೆಯಲ್ಲಿ 4 ಸ್ಥಾನಗಳನ್ನು ಗೆದ್ದಿತು. 1996ರಲ್ಲಿ 6 ಸ್ಥಾನಗಳನ್ನು ಗೆದ್ದುಕೊಂಡಿತು. 1998ರಲ್ಲಿ 13 ಸ್ಥಾನಗಳನ್ನು ಗೆದ್ದರೆ, 1999ರಲ್ಲಿ 7 ಸ್ಥಾನಗಳಿಗೆ ಕುಸಿದಿತ್ತು. ಆನಂತರ 2004ರಲ್ಲಿ 18, 2009ರಲ್ಲಿ 19, 2014ರಲ್ಲಿ 17 ಹಾಗೂ 2019ರಲ್ಲಿ 25 ಸ್ಥಾನಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ.

ಒಂದು ರಾಜಕೀಯ ಪಕ್ಷವಾಗಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದು ಆ ಮೂಲಕ ಬಿಜೆಪಿ ಬೆಳವಣಿಗೆ ಆಯಿತೇ? ಬಿಜೆಪಿಯದ್ದು ಸಹಜ ಬೆಳವಣಿಗೆಯೇ ಅಥವಾ ಇತರ ಪಕ್ಷಗಳು ದುರ್ಬಲವಾದ ಅಥವಾ ಇಲ್ಲವಾಗಿ ಹೋದ ಹಿನ್ನೆಲೆಯಲ್ಲಿ ಅದು ಬೆಳೆಯಿತೇ? ಅದು ಬೆಳೆದಂತೆ ಕಾಣಿಸುತ್ತಿರುವುದರಲ್ಲಿ ಆಪರೇಷನ್ ಕಮಲದ ಪಾಲೆಷ್ಟು? ಬಿಜೆಪಿಯನ್ನು ಇವತ್ತಿನ ಸ್ಥಿತಿಗೆ ತಂದು ತಲುಪಿಸುವಲ್ಲಿ ಜೆಡಿಎಸ್‌ನ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಪಾಲು ಎಷ್ಟಿದೆ?

ಮೊದಲನೆಯದಾಗಿ, ಸಿದ್ದರಾಮಯ್ಯನವರು ಹೇಳಿದಂತೆ ಅದು ಜನಾದೇಶದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸಿದ್ದೇ ಇಲ್ಲ. ಎರಡನೆಯದಾಗಿ, ಬಿಜೆಪಿ ಕರ್ನಾಟಕದಲ್ಲಿ ಮುನ್ನೆಲೆಗೆ ಬರುವಂತಾದದ್ದು ಜನತಾದಳ ತೆರೆಮರೆಗೆ ಸರಿದು, ಅದರ ನಾಯಕರೆಲ್ಲ ಒಬ್ಬೊಬ್ಬರಾಗಿ ಬಿಜೆಪಿಗೆ ವಲಸೆ ಬಂದದ್ದರಿಂದಾಗಿ. ಮೂರನೆಯದಾಗಿ, ಇತರ ಪಕ್ಷಗಳ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಂಡೇ ಬೆಳೆದ ಪಕ್ಷ ಅದೆಂಬುದರಲ್ಲಿ ಎರಡನೇ ಮಾತಿಲ್ಲ. ಅದು ಹಿಂಬಾಗಿಲ ರಾಜಕಾರಣ ಮಾಡಿಕೊಂಡೇ ಕರ್ನಾಟಕದಲ್ಲಿ ತನ್ನ ಅಧಿಕಾರದ ಹೆಬ್ಬಾಗಿಲನ್ನು ತೆರೆಯಿತು.

ಆದರೆ ಅಧಿಕಾರ ಪಡೆಯಿತು ಎನ್ನುವುದಷ್ಟೇ ಇವತ್ತಿನ ರಾಜರಣದಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ಹಿಂಬಾಗಿಲ ರಾಜಕಾರಣ ಎನ್ನುವುದು ಗೌಣವಾಗಿಬಿಡುತ್ತದೆ. ಅಂಥ ಹಿಂಬಾಗಿ ಲಿಂದ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟದ್ದು ಕೂಡ ಇತರ ಪಕ್ಷಗಳಲ್ಲಿ ನಡೆದ ಹಿಂಬಾಗಿಲ ರಾಜಕಾರಣವೇ ಆಗಿದೆ ಎಂಬುದೊಂದು ವ್ಯಂಗ್ಯ. ಒಂದು ಹಂತದಲ್ಲಿ, ಅಧಿಕಾರದಲ್ಲಿದ್ದ ಪಕ್ಷಗಳ ಬಗೆಗೆ ಜನ ರೋಸಿಹೋಗಿ ಬಿಜೆಪಿಯತ್ತ ಒಲವು ತೋರುವಂತಾದದ್ದು ಕೂಡ ಬಿಜೆಪಿಯ ಪಾಲಿಗೆ ಅನುಕೂಲಕರವಾಗಿ ಪರಿಣಮಿಸಿದ್ದು ಸುಳ್ಳಲ್ಲ.

ಕೆಲವು ಅಂಶಗಳನ್ನು ಹೀಗೆ ಗುರುತಿಸಬಹುದು

1. ಜನತಾ ಪರಿವಾರದ ನಾಯಕರು ಒಬ್ಬೊಬ್ಬರಾಗಿಯೇ ಬಿಜೆಪಿಗೆ ವಲಸೆ ಬರುತ್ತಿದ್ದಂತೆ, ಹೊಸ ಬಲ ಸಿಕ್ಕಂತಾಯಿತು. ಹೀಗೆ ಬಿಜೆಪಿ ಆ ನಾಯಕರ ಮೂಲಕ ತನ್ನ ನೆಲೆ ಭದ್ರಪಡಿಸಿಕೊಳ್ಳುವ ತಂತ್ರವೊಂದನ್ನು ಆ ಹೊತ್ತಿನ ಅನಿವಾರ್ಯತೆಯಲ್ಲಿ ಕಂಡುಕೊಂಡುಬಿಟ್ಟಿತ್ತು.

2. ಈಗಾಗಲೇ ಗಮನಿಸಿದಂತೆ 2004ರಲ್ಲಿ 79 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಅದರ ಬೆಳವಣಿಗೆಯ ಹಾದಿಯಲ್ಲಿನ ಮಹತ್ವದ ತಿರುವು. ಆಗ ಬಿಜೆಪಿಗೆ ಅನುಕೂಲಕರವಾಗುವಂಥ ಸನ್ನಿವೇಶವೊಂದು ಸೃಷ್ಟಿಯಾದದ್ದು ಜೆಡಿಎಸ್‌ನ ಕುಮಾರಸ್ವಾಮಿ ಮೂಲಕ. 2004ರ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರಕಾರವನ್ನು ಕುಮಾರಸ್ವಾಮಿ ಉರುಳಿಸಿದ್ದರು. ಬಿಜೆಪಿಯ ಜತೆ ಕೈಜೋಡಿಸಿ ಹೊಸ ಸಮ್ಮಿಶ್ರ ಸರಕಾರವನ್ನು ಅವರು ರಚಿಸುವುದರೊಂದಿಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಆಳುವ ಪಕ್ಷವಾಯಿತು. ಆ ಹೊತ್ತಿಗೆ ಬಿಜೆಪಿ ಅಸ್ತಿತ್ವಕ್ಕೆ ಬಂದು 25 ವರ್ಷಗಳಾಗಿದ್ದವು.

3. ಕುಮಾರಸ್ವಾಮಿ ಸರಕಾರದಲ್ಲಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದದ್ದು ಇಪ್ಪತ್ತು ತಿಂಗಳ ಬಳಿಕ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಬೇಕೆಂಬ ಷರತ್ತಿನೊಂದಿಗೆ. ಆದರೆ ಆ ಹೊತ್ತಿಗೆ ಆಘಾತವಾದರೂ ಮುಂದೆ ಬಿಜೆಪಿಗೆ ಬಹಳ ದೊಡ್ಡಮಟ್ಟದಲ್ಲಿ ಅನುಕೂಲವಾಗಲು ಕಾರಣವಾದದ್ದು ಕುಮಾರಸ್ವಾಮಿ ತೆಗೆದುಕೊಂಡ ತೀರ್ಮಾನ. ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾಗುವ ಆಸೆಯಲ್ಲಿದ್ದ ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ಸಿಂಪಥಿಯನ್ನೂ, ಬೆಂಬಲವನ್ನೂ ಭಾರೀ ಪ್ರಮಾಣದಲ್ಲಿ ಪಡೆಯಲು ಸನ್ನಿವೇಶವೊಂದು ನಿರ್ಮಾಣವಾಗಿಬಿಟ್ಟಿತ್ತು. ಇದ್ದಕ್ಕಿದ್ದಂತೆ ಯಡಿಯೂರಪ್ಪನವರಿಗೆ ಬಿಜೆಪಿಯೊಳಗೆ ಬೇರೆಯದೇ ಬಗೆಯ ಮಹತ್ವ ಪ್ರಾಪ್ತವಾಗಿಬಿಟ್ಟಿತ್ತು.

4. ಮುಂದೆ 2008ರ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಗೆದ್ದುಬಿಟ್ಟಿತು. ಅಧಿಕಾರ ಹಿಡಿಯಲು ಬೇಕಾದ 3 ಸ್ಥಾನಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ಪಕ್ಷದಲ್ಲಿದ್ದರು. ಅಗತ್ಯ ಸಂಖ್ಯಾಬಲ ಕೂಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. ಹೀಗೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರದ ಹೆಬ್ಬಾಗಿಲು ತೆರೆಯಿತು. ಕರ್ನಾಟಕಕ್ಕೆ, ದಕ್ಷಿಣ ಭಾರತಕ್ಕೇ ಮೊದಲ ಬಿಜೆಪಿ ಸಿಎಂ ಆಗಿ ಯಡಿಯೂರಪ್ಪ ಅಧಿಕಾರಕ್ಕೆ ಏರಿದರು.

5. ಆದರೆ ಹಾಗೆ ಅಧಿಕಾರಕ್ಕೆ ಏರಿದ ಬಿಜೆಪಿ ಅವಧಿಯಲ್ಲಿ ಎಷ್ಟು ದೊಡ್ಡ ರಾಜಕೀಯ ತಮಾಷೆ ನಡೆಯಿತೆಂದರೆ, ಒಂದೇ ಅವಧಿಯಲ್ಲಿ ಅಧಿಕಾರ ಬಿಜೆಪಿಯೊಳಗೆ ನಾಯಕರಿಂದ ನಾಯಕರಿಗೆ ಬದಲಾಯಿತು. ಯಡಿಯೂರಪ್ಪ ಜೈಲುಪಾಲಾದದ್ದು, ಅವರ ಕೃಪೆಯಿಂದ ಸದಾನಂದಗೌಡ ಮುಖ್ಯಮಂತ್ರಿಯಾದದ್ದು, ಆ ಬಳಿಕ ಅವರು ಯಡಿಯೂರಪ್ಪನವರ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಪಾಲಿಗೆ ಮುಖ್ಯಮಂತ್ರಿ ಹುದ್ದೆ ಒಲಿದದ್ದು ಎಲ್ಲವೂ ನಡೆದು ಹೋಯಿತು. ಆ ವಿಚಿತ್ರ ಸನ್ನಿವೇಶದ ಬಗ್ಗೆ ಹೇಳುತ್ತ, ಗುಜರಾತಿನಲ್ಲಿ ಮೂರು ಅವಧಿಗೆ ಒಬ್ಬರೇ ಮುಖ್ಯಮಂತ್ರಿ, ಇಲ್ಲಿ ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳು ಎಂದು ಸ್ವತಃ ಸದಾನಂದಗೌಡರು ತಮಾಷೆ ಮಾಡಿದ್ದರು.

6. ಮುಂದೆ 2013ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಪೂರ್ಣಾವಧಿ ಸರಕಾರ ನಡೆಸಿದ ಬಳಿಕ 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಯಿತು. ಆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ಆಪರೇಷನ್ ಕಮಲದ ಮೂಲಕ ಆ ಎರಡೂ ಪಕ್ಷಗಳ ಶಾಸಕರನ್ನು ಸೆಳೆದು 2019ರ ಮಧ್ಯದಲ್ಲಿ ಮತ್ತೆ ಅಧಿಕಾರಕ್ಕೇರಿತು.

ಕರ್ನಾಟಕದಲ್ಲಿನ ಬಿಜೆಪಿ ಬೆಳವಣಿಗೆ ವಿಚಾರದಲ್ಲಿ ಮೂರು ಪ್ರಮುಖ ಸಂಗತಿಗಳನ್ನು ಗಮನಿಸಬೇಕು.

ಒಂದು, ಜೆಡಿಎಸ್‌ನ ಕುಮಾರಸ್ವಾಮಿಯವರ ಸಮಯ ಸಾಧಕ ರಾಜಕೀಯದಿಂದಾಗಿ ಅವಕಾಶ ಪಡೆದು ಅಧಿಕಾರದ ರುಚಿ ಹತ್ತಿದ್ದ ಬಿಜೆಪಿ ಅದೊಂದೇ ಕಾರಣದಿಂದ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಂಡಿತು. 2013-2018ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯುದ್ದಕ್ಕೂ ಬಿಜೆಪಿ ಪ್ರಯೋಗಿಸಿದ್ದು ಹಿಂದುತ್ವದ ಅಸ್ತ್ರವನ್ನು. ಸಿದ್ದರಾಮಯ್ಯ ಸರಕಾರ ಹಿಂದೂ ವಿರೋಧಿ ಎಂದು ಈಗ ಹೇಗೆ ಜರೆಯಲಾಗುತ್ತಿದೆಯೋ ಇದನ್ನೇ ಆಗಲೂ ಮಾಡಲಾಗಿತ್ತು. ಈ ವ್ಯವಸ್ಥಿತ ಅಪಪ್ರಚಾರ ಎಷ್ಟು ಪರಿಣಾಮಕಾರಿಯಾಗಿ ಬಿಟ್ಟಿತ್ತೆಂದರೆ, ಪೂರ್ಣಾವಧಿ ಸರಕಾರವನ್ನು ಕೊಟ್ಟಿದ್ದ, ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದ ಸಿದ್ದರಾಮಯ್ಯನವರ ಮಹತ್ವವೇ ಮುಂದಿನ ಚುನಾವಣೆಯ ಹೊತ್ತಿಗೆ ಕಡಿಮೆಯಾಗಿ, ಅವರು ಅಧಿಕಾರದಿಂದ ದೂರವಾಗುವಂತಾಯಿತು.

ಎರಡು, 2014ರಿಂದ ರಾಷ್ಟ್ರಮಟ್ಟದಲ್ಲಿ ಮೋದಿ ಅಲೆ ಎದ್ದಿತ್ತು. ದೇಶಕ್ಕೆ, ಹಿಂದೂ ಧರ್ಮಕ್ಕೆ ಮೋದಿ ಮತ್ತು ಬಿಜೆಪಿ ಅನಿವಾರ್ಯ ಎಂದು ಬಿಂಬಿಸುವುದು ದೊಡ್ಡ ಮಟ್ಟದಲ್ಲಿ ನಡೆಯಿತು. ಅಷ್ಟರವರೆಗೆ ಯಡಿಯೂರಪ್ಪನವರನ್ನೇ ನೆಚ್ಚಿಕೊಂಡಿದ್ದ ಬಿಜೆಪಿ, ಆಮೇಲೆ ಮೋದಿ ಮುಖವನ್ನೇ ಇಟ್ಟುಕೊಂಡು ರಾಜ್ಯದಲ್ಲಿಯೂ ಚುನಾವಣೆ ಗೆಲ್ಲುವ ಹೊಸ ತಂತ್ರವೊಂದನ್ನು ಕಂಡುಕೊಂಡಿತು. ಎಲ್ಲರೂ ಬಿಜೆಪಿ ಕಡೆ ಮುಖ ಮಾಡತೊಡಗಿದ್ದಾಗ, ಸನ್ನಿವೇಶದ ಪ್ರಭಾವದಿಂದಾಗಿಯೋ, ಸ್ವಯಂಕೃತ ಅಪರಾಧಗಳಿಂದಾಗಿಯೋ ಕಾಂಗ್ರೆಸ್, ಜೆಡಿಎಸ್ ಒಳಗೊಳಗೇ ದುರ್ಬಲವಾಗತೊಡಗಿದ್ದವು.

ಮೂರು, ಇದೆಲ್ಲದರ ಮತ್ತಿನಲ್ಲಿ ಮೈಮರೆತ ಬಿಜೆಪಿ 2019ರಿಂದ 2023ರಲ್ಲಿ ಅಧಿಕಾರ ಕಳೆದುಕೊಳ್ಳುವಲ್ಲಿಯವರೆಗೂ ದುರಾಡಳಿತದಲ್ಲಿಯೇ ಮುಳುಗಿತ್ತು. ಅದು ಅಂಟಿಸಿಕೊಂಡಿದ್ದ ಭ್ರಷ್ಟಾಚಾರದ ಕಳಂಕಗಳು ಒಂದೆಡೆಯಾದರೆ, ಮತೀಯವಾಗಿ ಸಮಾಜವನ್ನು ಒಡೆಯುವ ಮನಸ್ಥಿತಿಯಿಂದ ಆಡಿದ ಆಟಗಳು ಮತ್ತೊಂದೆಡೆ ಇದ್ದವು. ಅಭಿವೃದ್ಧಿಯನ್ನೇ ಮಾಡದೆ, ಹೀಗೆ ಜನರನ್ನು ಒಡೆಯುವ, ದ್ವೇಷ ಬಿತ್ತುವ ರಾಜಕಾರಣ ಮಾಡಿಕೊಂಡು ಬಂದ ಅದರ ಬಣ್ಣ ಬಯಲಾಗಿತ್ತು.

2023ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವು ದರೊಂದಿಗೆ ಒಂದು ಪರ್ವವೇನೋ ಮುಗಿದಿದೆ. ಮತ್ತೀಗ ಸಿದ್ದರಾಮಯ್ಯ ಸರಕಾರವನ್ನು ಹಿಂದುತ್ವ ವಿರೋಧಿ ಎಂದು ಬಿಜೆಪಿ ಆರೋಪಿಸುವುದು ಜೋರಾಗಿದೆ. ಅದರರ್ಥ, ಮತ್ತದೇ ಹಳೆಯ ತಂತ್ರವನ್ನು ಅಸ್ತ್ರವಾಗಿ ಅದು ಬಳಸುತ್ತಿದೆ.

ಹಿಂದುತ್ವ ವಿಚಾರ, ಮತೀಯ ಗಲಾಟೆಗಳನ್ನು ಮುಂದಿಟ್ಟುಕೊಂಡು ಆಟವಾಡುತ್ತಲೇ ಬಂದಿದೆ ಮತ್ತದನ್ನು ಮುಂದುವರಿಸುತ್ತಲೂ ಇದೆ. ಮೋದಿ ಅಲೆ ಕಳೆದ ಚುನಾವಣೆಯಲ್ಲಿ ಅದರ ಕೈಹಿಡಿಯಲಿಲ್ಲವಾದರೂ, ಹಾಗೆಂದು ಆ ತಂತ್ರವನ್ನು ಒಮ್ಮೆಲೆ ಬಿಟ್ಟುಬಿಡುವುದಿಲ್ಲ ಅದು. ಮತ್ತೆ ಮತ್ತೆ ಅದನ್ನೇ ಪ್ರಯೋಗಿಸಿ ಗೆಲುವಾಗಿ ತಿರುಗಿಸಿಕೊಳ್ಳಲು ನೋಡುತ್ತದೆ.

ಈಗಿನ ಒಂದು ಬೆಳವಣಿಗೆಯೆಂದರೆ, ಲೋಕಸಭೆ ಚುನಾವಣೆ ಗಾಗಿ ಅದು ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿ ಕೊಂಡಿರುವುದು. ಇದು ರಾಜ್ಯದ ರಾಜಕೀಯವನ್ನು ಎಲ್ಲಿಗೆ ತೆಗೆದುಕೊಂಡು ಹೋದೀತು ಎಂಬುದು ಗಂಭೀರ ಪ್ರಶ್ನೆ. ಹೆಸರಿನಲ್ಲಿ ಜಾತ್ಯತೀತ ಎಂದಿರುವ ಪ್ರಾದೇಶಿಕ ಪಕ್ಷ ತನ್ನ ಪ್ರಾದೇಶಿಕ ಮತ್ತು ತಾತ್ವಿಕ ಎರಡೂ ಬಗೆಯ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನಗಳು ಸಿಗುತ್ತಿವೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ತಮ್ಮ ಪಕ್ಷದ ಹಸಿರು ಶಾಲನ್ನು ಮರೆತಿ ದ್ದಾರೆ. ಬಿಜೆಪಿಯವರೊಡನೆ ಕೇಸರಿ ಶಾಲು ಹಾಕಿಕೊಂಡು ನಿಂತು ಜೈಶ್ರೀರಾಮ್ ಘೋಷಣೆಯನ್ನು ಹಾಕುತ್ತಿದ್ದಾರೆ. ಅದರ ನಡುವೆಯೇ, ಅವರ ಹೇಳಿಕೆಗಳಲ್ಲಿ ಮತ್ತೆ ಮತ್ತೆ ಬರುವ ಆತ್ಮಸಾಕ್ಷಿ ಎಂಬ ಪದ ಅವರ ಪಕ್ಷದ ಹೆಸರಲ್ಲಿನ ಜಾತ್ಯತೀತ ಪದದಷ್ಟೇ ನಿರ್ಗತಿಕವಾಗಿದೆ. ಅಷ್ಟಕ್ಕೂ ಈ ಮೈತ್ರಿ ಎಷ್ಟು ಕಾಲ ಬಾಳೀತು ಎಂಬುದೂ ಆ ಎರಡೂ ಪಕ್ಷಗಳಿಗೇ ಸ್ಪಷ್ಟವಿಲ್ಲ. ಅಲ್ಲಿರುವುದು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಹುದಾದ ಧೋರಣೆ ಮಾತ್ರ.

ಇದೆಲ್ಲದರ ನಡುವೆಯೇ ಕಣ್ಣಿಗೆ ರಾಚುವ ಒಂದು ಸತ್ಯವೆಂದರೆ, ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ದಶಕಗಳಾಗುತ್ತಿದ್ದರೂ, ಕರ್ನಾಟಕದಲ್ಲಿ ಬಿಜೆಪಿಗೆ ಬಹಳ ದೊಡ್ಡ ಮಟ್ಟದ ಬೆಂಬಲ ಇದೆಯೆಂದು ಮೇಲ್ನೋಟಕ್ಕೆ ಅನ್ನಿಸುವಂತಿದ್ದರೂ, ಇಷ್ಟು ಕಾಲವೂ ಅದಕ್ಕೆ ಸರಳ ಬಹುಮತ ಪಡೆಯುವುದು ಸಾಧ್ಯವಾಗಿಲ್ಲ ಎಂಬುದು. ರಾಷ್ಟ್ರಮಟ್ಟದಲ್ಲಿಯೂ, ಮೇಯರ್ ಚುನಾವಣೆಯಂಥ ಮಟ್ಟದಲ್ಲೂ ಹಿಂಬಾಗಿಲ ಅಥವಾ ಕೆಲವೊಮ್ಮೆ ಫಲಿತಾಂಶ ವನ್ನೇ ತಿರುಚುವ ರಾಜಕಾರಣವನ್ನೇ ಬಹುತೇಕ ನೆಚ್ಚಿರುವ, ಅಕ್ರಮಗಳ ಮೂಲಕವೇ ಅಧಿಕಾರ ಕಬಳಿಸುವ ಚಾಳಿಯ ಬಿಜೆಪಿ ಕರ್ನಾಟಕದಲ್ಲಿ ಇನ್ನು ಮುಂದೆಯೂ ಹಿಂಬಾಗಿಲ ರಾಜಕಾರಣವನ್ನೇ ಮಾಡಲಿದೆಯೇ? ಮತ್ತು ಆ ಮೂಲಕವೇ ತಾನು ಬೆಳೆದಿರುವಂತೆ ಬಿಂಬಿಸಿಕೊಳ್ಳಲಿದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News