ಚುನಾವಣಾ ಕಾಲದ ಪಕ್ಷಾಂತರ ಪರ್ವ

Update: 2024-04-17 04:23 GMT
Editor : Ismail | Byline : ಆರ್. ಜೀವಿ

ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿರುವ ಎಎಪಿ ನಾಯಕ ಸಂಜಯ್ ಸಿಂಗ್ ಒಂದು ಮಾತು ಹೇಳಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತವರನ್ನೆಲ್ಲ ಹೇಗೆ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡು ಅವರನ್ನು ಪರಿಶುದ್ಧರನ್ನಾಗಿ ಮಾಡಿಬಿಡುತ್ತದೆ ಎಂಬುದನ್ನು ಲೇವಡಿ ಮಾಡುತ್ತ ಅವರು, ಅತಿ ದೊಡ್ಡ ಭ್ರಷ್ಟಾಚಾರಿ ಅತಿ ದೊಡ್ಡ ಪದಾಧಿಕಾರಿ ಎಂದು ಟೀಕಿಸಿದ್ದಾರೆ. ಬಿಜೆಪಿಗೆ ಹೋದವರೆಲ್ಲ ಭ್ರಷ್ಟಾಚಾರ ಪ್ರಕರಣದಿಂದ ಮುಕ್ತಿ ಪಡೆಯುವುದರ ಜೊತೆಗೇ ಆ ಪಕ್ಷದಲ್ಲಿ ಮಹತ್ವದ ಸ್ಥಾನಗಳನ್ನೂ ಪಡೆಯುತ್ತಿರುವುದನ್ನು ಕಾಣಬಹುದು. ಹಾಗೆಯೇ ಈ ಸಲದ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳಲ್ಲಿ ಪಕ್ಷಾಂತರಿಗಳೇ ಸಾಕಷ್ಟಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ಈ ಹಡಗು ಬಿಟ್ಟು ಆ ಹಡಗಿಗೆ ಹಾರಿಕೊಂಡು ಅವಕಾಶವಾದಿ ರಾಜಕಾರಣ ಮಾಡುವವರ ದಂಡೇ ಇರುತ್ತದೆ. ಇದು ಒಂದು ಬಗೆಯಾದರೆ, ಬಿಜೆಪಿ ಬಳಿಯಿರುವ ಈ.ಡಿ., ಸಿಬಿಐ ಅಂಥ ಅಸ್ತ್ರಗಳಿಗೆ ಹೆದರಿ ಅತ್ತ ಕಡೆ ಹೋಗಿ ಸೇರಿಕೊಳ್ಳುವವರು, ಬಚಾವಾಗುವುದಕ್ಕಾಗಿ ಪಕ್ಷಾಂತರ ಮಾಡುವ ಅನಿವಾರ್ಯತೆಗೆ ಸಿಲುಕುವವರೂ ಮತ್ತೊಂದೆಡೆ ಇದ್ದಾರೆ. ಹಾಗೆಂದು ಎಲ್ಲರೂ ಇತರ ಪಕ್ಷಗಳಿಂದ ಬಿಜೆಪಿ ಕಡೆ ಮಾತ್ರವೇ ಹೋಗುತ್ತಾರೆ ಎಂದೇನೂ ಅಲ್ಲ. ಬಿಜೆಪಿಯಿಂದ ಕಾಂಗ್ರೆಸ್ನಂಥ ಪಕ್ಷಗಳಿಗೆ ಬರುವವರೂ ಇದ್ದಾರೆ.

ಇದೇ 19ರಿಂದ ಮಹಾ ಚುನಾವಣೆ. ಕಾಂಗ್ರೆಸ್ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ಗೆ ಬಿಡಾರ ಬದಲಿಸುವವರ ಸಂಖ್ಯೆ ಈ ಹೊತ್ತಲ್ಲಿ ಹೆಚ್ಚಾಗುವುದರ ಹಿಂದೆ ಟಿಕೆಟ್ ಕೈತಪ್ಪುವುದೂ ಮುಖ್ಯ ಕಾರಣವಾಗಿರುತ್ತದೆ. ಒಂದೆಡೆ ತಪ್ಪಿದ್ದನ್ನು ಮತ್ತೊಂದೆಡೆ ಗಿಟ್ಟಿಸಿಕೊಳ್ಳಲು ನೋಡುತ್ತಾರೆ.

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರ ಪಕ್ಷಾಂತರ ಸರಣಿಯೂ ಮುಂದುವರಿದಿದೆ. ಈಚೆಗಷ್ಟೇ ಕಾಂಗ್ರೆಸ್ ತೊರೆದ ಗೌರವ್ ವಲ್ಲಭ್ ಬಿಜೆಪಿ ಸೇರಿದ್ಧಾರೆ. ಆದರೆ, ಪಕ್ಷದ ವಕ್ತಾರರಾಗಿದ್ದ ಅವರು ಕಾಂಗ್ರೆಸ್ ಬಿಡುವಾಗ ಹೇಳಿರುವ ಮಾತುಗಳು, ಕಾಂಗ್ರೆಸ್ ಬಿಡುವುದಕ್ಕೆ ಕೊಟ್ಟಿರುವ ನೆಪಗಳು ಮಾತ್ರ ಹಾಸ್ಯಾಸ್ಪದವಾಗಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಸನಾತನ ವಿರೋಧಿ ಘೋಷಣೆ ತನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಸಂಪತ್ತು ಸೃಷ್ಟಿಸುವವರನ್ನು ದಿನವೂ ನಿಂದಿಸಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ಎಲ್ಲಾ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಬರೆದಿದ್ದಾರೆ.

ವಲ್ಲಭ್ ಹಲವಾರು ತಿಂಗಳುಗಳಿಂದ ಪಕ್ಷದ ಪರವಾಗಿ ಟಿವಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ ಮತ್ತು ದೀರ್ಘ ಕಾಲ ಯಾವುದೇ ಸುದ್ದಿಗೋಷ್ಠಿ ನಡೆಸಿರಲಿಲ್ಲ. ಕಾಂಗ್ರೆಸ್ಗೆ ಸೇರಿದಾಗ, ನಾನು ಅದನ್ನು ನಂಬಿದ್ದೆ. ಯುವಕರು ಮತ್ತು ಬುದ್ಧಿಜೀವಿಗಳು ಮತ್ತು ಅವರ ಆಲೋಚನೆಗಳನ್ನು ಗೌರವಿಸುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್. ಆದರೆ ಹೊಸ ಆಲೋಚನೆಗಳನ್ನು ಹೊಂದಿರುವ ಯುವಕರ ಜತೆ ಪಕ್ಷ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತು ಎಂದೆಲ್ಲ ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಹೀಗೆ ಹೇಳಿದ ಅವರು ಬಿಜೆಪಿ ಸೇರಿದ್ಧಾರೆ. ಈ ದೇಶದ ಲಕ್ಷಾಂತರ ಯುವಕರನ್ನು ನಿರುದ್ಯೋಗಿಗಳನ್ನಾಗಿಸಿರುವ, ಉಚಿತ ಇಂಟರ್ನೆಟ್ ಕೊಟ್ಟು ಮೊಬೈಲ್ ನೋಡಿಕೊಂಡು ಕೂರುವಂತೆ ಮಾಡಿ ಅವರನ್ನೆಲ್ಲ ಮೂರ್ಖರನ್ನಾಗಿಸಿರುವ ಬಿಜೆಪಿಯಲ್ಲಿ ಅವರಿಗೆ ಅಂಥದ್ದೇನು ದೊಡ್ಡದು ಕಂಡಿರಬಹುದು? ಜೊತೆಗೇ, ಬಿಜೆಪಿ ಧರ್ಮದ ಹೆಸರಲ್ಲಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಎಂದು ದೂರುತ್ತಲೇ ಕಾಂಗ್ರೆಸ್ ಸೇರಿದ್ದ ಗೌರವ್ಗೆ ಈಗ ಕಾಂಗ್ರೆಸ್ ಹಿಂದೂ ವಿರೋಧಿಯಾಗಿ ಕಂಡಿರುವುದು ತಮಾಷೆಯಾಗಿದೆ.

ಅಂತೂ ಈ ಪಕ್ಷ ಬಿಟ್ಟು ಆ ಪಕ್ಷಕ್ಕೆ ಹೋಗಬೇಕು ಎನ್ನುವಾಗ ಹೀಗೆ ತಮಗೆ ಅನುಕೂಲವಾಗುವಂತೆ ನೆಪಗಳನ್ನು ಮುಂದೆ ಮಾಡುವುದು ಎಲ್ಲ ಪಕ್ಷಾಂತರಿಗಳ ಹಣೆಬರಹವೇ ಆಗಿದೆ. ಒಲಿಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬೆನ್ನಲ್ಲೇ ಗೌರವ್ ವಲ್ಲಭ್ ಪಕ್ಷಾಂತರವೂ ಆಗಿದೆ. ಈ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿರುವ ಬಿಜೆಪಿ, ಚುನಾವಣೆಯಲ್ಲಿ ಸಾಕಷ್ಟು ಮಂದಿ ಹೊರಗಿನವರಿಗೇ ಟಿಕೆಟ್ ನೀಡುತ್ತಿರುವ ಬೆಳವಣಿಗೆಯನ್ನು ಕೂಡ ಗಮನಿಸಬಹುದು.

ಚುನಾವಣೆಗೆ ಮೊದಲು ವಿವಿಧ ಪಕ್ಷಗಳಿಂದ ಕನಿಷ್ಠ 34 ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರಲ್ಲಿ,

ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರು 16; ಬಿಆರ್ಎಸ್ನಿಂದ ಹೋದವರು 8; ಆಮ್ ಆದ್ಮಿ ಪಕ್ಷ ಮತ್ತು ವೈಎಸ್ಆರ್ಸಿಪಿಯಿಂದ ಹೋದವರು ತಲಾ ಇಬ್ಬರು; ಬಿಜೆಡಿ, ಬಿಎಸ್ಪಿ, ಜೆಎಂಎಂ, ಟಿಡಿಪಿ, ಟಿಎಂಸಿ ಮತ್ತು ಪಕ್ಷೇತರ -ತಲಾ ಒಬ್ಬರು.

ಹೀಗೆ ಬಿಜೆಪಿಗೆ ಜಿಗಿದ ಇಷ್ಟು ಸಂಖ್ಯೆಯ ನಾಯಕರಲ್ಲಿ ಕೆಲವು ಪ್ರಮುಖರೆಂದರೆ, ಅಶೋಕ್ ತನ್ವರ್, ಭರ್ತೃಹರಿ ಮಹತಾಬ್, ಬಿ.ಬಿ. ಪಾಟೀಲ್, ಕಿರಣ್ ಕುಮಾರ್ ರೆಡ್ಡಿ, ಪ್ರಣೀತ್ ಕೌರ್, ನವೀನ್ ಜಿಂದಾಲ್, ಜಿತಿನ್ ಪ್ರಸಾದ್, ಅನಿಲ್ ಕೆ. ಆ್ಯಂಟನಿ, ರಂಜಿತ್ ಸಿಂಗ್ ಚೌತಾಲಾ, ವಿಜೇಂದರ್ ಸಿಂಗ್ ಮತ್ತು ಸೌಮೇಂದು ಅಧಿಕಾರಿ.

ಅಶೋಕ್ ತನ್ವರ್ ಎಎಪಿಯಿಂದ ಬಿಜೆಪಿ ಸೇರಿರುವುದು ಹರ್ಯಾಣದ ಸಿರ್ಸಾದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುವುದಕ್ಕಾಗಿ. ಅವರು ಈ ಹಿಂದೆ ಹರ್ಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಂತಹ ಪ್ರಮುಖ ಸ್ಥಾನಗಳಲ್ಲಿದ್ದರು. ಭರ್ತೃಹರಿ ಮಹತಾಬ್ ಬಿಜೆಡಿಯಲ್ಲಿದ್ದಾಗ ಸತತ ಆರು ಬಾರಿ ಸಂಸದರಾಗಿದ್ದರು. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉದ್ಯಮಿ ನವೀನ್ ಜಿಂದಾಲ್ 2004 ಮತ್ತು 2009ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ತಮ್ಲುಕ್ ಕ್ಷೇತ್ರದ ಮಾಜಿ ಟಿಎಂಸಿ ಸಂಸದ ಸೌಮೇಂದು ಅಧಿಕಾರಿ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ್ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ ಸುವೇಂದು ಅಧಿಕಾರಿಯ ಸಹೋದರರಾಗಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ 437 ಅಭ್ಯರ್ಥಿಗಳಲ್ಲಿ 23 ಪಕ್ಷಾಂತರಿಗಳಿದ್ದರು.

ಅವರಲ್ಲಿ 13 ಮಂದಿ ಮಾತ್ರ ಗೆದ್ದಿದ್ದರು. ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ, ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಹಾಗೂ ಮಹಾರಾಷ್ಟ್ರ, ಹರ್ಯಾಣದಲ್ಲಿನ ತಲಾ ಒಂದು ಕ್ಷೇತ್ರಗಳಲ್ಲಿ ಪಕ್ಷಾಂತರಿಗಳು ಗೆದ್ದಿದ್ದರು.

 

ಈಗ, ಲೋಕಸಭೆ ಚುನಾವಣೆಯ ಮೊದಲ ಹಂತದ ಅಭ್ಯರ್ಥಿಗಳಾಗಿರುವ ಒಟ್ಟು 18 ಮಂದಿ ಕಳೆದ ಐದು ವರ್ಷಗಳಲ್ಲಿ ಒಮ್ಮೆ ಅಥವಾ ಹಲವು ಬಾರಿ ತಮ್ಮ ರಾಜಕೀಯ ನಿಷ್ಠೆ ಬದಲಾಯಿಸಿದವರಾಗಿದ್ದಾರೆ. ಅವರಲ್ಲಿ ಅನೇಕರು ಸಾರ್ವತ್ರಿಕ ಚುನಾವಣೆಗಳಿಗೆ ಕೆಲವೇ ವಾರಗಳು ಮತ್ತು ತಿಂಗಳುಗಳಷ್ಟೇ ಇದ್ದ ಹೊತ್ತಲ್ಲಿ ಪಕ್ಷ ಬದಲಾಯಿಸಿದವರು. ಅವರಲ್ಲಿ ಒಂಭತ್ತು ಮಂದಿ ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿ ದ್ದಾರೆ. ಇಬ್ಬರು ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರಾದರೆ, ಒಬ್ಬರು ಶಿವಸೇನೆ ಶಿಂದೆ ಬಣಕ್ಕೆ ಪಕ್ಷಾಂತರವಾದವರು. ಹಾಗೆಯೇ, ಆರು ಮಂದಿ ‘ಇಂಡಿಯಾ’ ವಿಪಕ್ಷ ಒಕ್ಕೂಟವನ್ನು ಸೇರಿಕೊಂಡರೆ, ಮೂವರು ಎಐಎಡಿಎಂಕೆ ಸೇರಿದರು. ಪಕ್ಷಾಂತರ ಮಾಡಿದವರಲ್ಲಿ ಟಿಕೆಟ್ ಸಿಗದೇ ಇದ್ದುದಕ್ಕೆ ಕಾಂಗ್ರೆಸ್ ಸೇರಿದ ಒಬ್ಬ ಹಾಲಿ ಸಂಸದ ಸೇರಿದಂತೆ ಇಬ್ಬರು ಬಿಜೆಪಿ ನಾಯಕರೂ ಸೇರಿದ್ದಾರೆ.

 

ಜ್ಯೋತಿ ಮಿರ್ಧಾ: ಡಾ. ಜ್ಯೋತಿ ಮಿರ್ಧಾ ರಾಜಸ್ಥಾನದ ನಾಗೌರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 51 ವರ್ಷದ ಮಿರ್ಧಾ ವೈದ್ಯೆ. 2009ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ನಾಗೌರ್ನಿಂದ ಸ್ಪರ್ಧಿಸಿ ರಾಜಕೀಯಕ್ಕೆ ಕಾಲಿಟ್ಟರು.

ಆಗ ಅವರು ಬಿಜೆಪಿಯ ಬಿಂದು ಚೌಧರಿ ವಿರುದ್ಧ 1.55 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಅದೇ ಅವರ ಮೊದಲ ಮತ್ತು ಈವರೆಗಿನ ಕೊನೆಯ ಗೆಲುವು. ಆನಂತರ ಅವರು ಎರಡು ಬಾರಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ದ ನಾಗೌರ್ನಲ್ಲಿಯೇ ಸೋತರು. ಅಂತಿಮವಾಗಿ, ಅವರು ಕಾಂಗ್ರೆಸ್ ತೊರೆದು 2023ರ ವಿಧಾನಸಭಾ ಚುನಾವಣೆಗೆ ವಾರಗಳ ಮೊದಲು ಬಿಜೆಪಿ ಸೇರಿದರು. ಮಿರ್ಧಾ ಅವರ ಆಸ್ತಿ 2009ರಲ್ಲಿ 3 ಕೋಟಿ ರೂ.ಇದ್ದದ್ದು 2024ರಲ್ಲಿ 102 ಕೋಟಿ ರೂ.ಗೆ ಏರಿದೆ. ಅಂದರೆ ಶೇ.3,300ರಷ್ಟು ಜಂಪ್ ಆಗಿದೆ. ಸಂಸದೆಯಾಗಿದ್ದ ಐದು ವರ್ಷಗಳಲ್ಲಿಯೇ ಅವರ ಆಸ್ತಿ 58 ಕೋಟಿ ರೂ. ಏರಿತ್ತು ಅವರ ಪ್ರೊಫೈಲ್ ಈಗ ಮೋದಿ ಕವರ್ ಚಿತ್ರದೊಂದಿಗೆ ಪೂರ್ತಿ ಕೇಸರಿಮಯವಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ನ ಹಲವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಸವಾಯಿ ಸಿಂಗ್ ಚೌಧರಿ ಬಿಜೆಪಿ ಸೇರಿದ ಬೆನ್ನಲ್ಲೇ ಇತರ 30 ಮಂದಿ ಕೂಡ ಸೇರಿದರು. ಇವರಲ್ಲಿ ಕಾಂಗ್ರೆಸ್ನ ಮಹೇಂದ್ರಜೀತ್ ಸಿಂಗ್ ಮಾಳವಿಯಾ, ಅಶೋಕ್ ಗೆಹ್ಲೋಟ್ ನಿಷ್ಠಾವಂತ ಎಂದೇ ಹೇಳಲಾಗುವ ಲಾಲ್ಚಂದ್ ಕಟಾರಿಯಾ, ಮಾಜಿ ರಾಜ್ಯ ಸಚಿವ ರಾಜೇಂದ್ರ ಯಾದವ್ ಮತ್ತು ಶಾಸಕರಾದ ರಿಚ್ಪಾಲ್ ಸಿಂಗ್ ಮಿರ್ಧಾ, ವಿಜಯಪಾಲ್ ಮಿರ್ಧಾ, ಖಿಲಾಡಿ ಭೈರವ ಮತ್ತು ರಾಮ್ ನಾರಾಯಣ್ ಕಿಸಾನ್ ಸೇರಿದ್ದಾರೆ.

 

ಹನುಮಾನ್ ಬೇನಿವಾಲ್:

ಹನುಮಾನ್ ಬೇನಿವಾಲ್ ಖಿನ್ವಸರ್ ಕ್ಷೇತ್ರದಿಂದ ಆರ್ಎಲ್ಪಿ ಅಭ್ಯರ್ಥಿಯಾಗಿದ್ದಾರೆ.

ಬೇನಿವಾಲ್ ನಾಲ್ಕು ಬಾರಿ ಶಾಸಕರಾಗಿರುವವರು ಮತ್ತು ಜಾಟ್ ಸಮುದಾಯದ ಜನಪ್ರಿಯ ನಾಯಕ. ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಖಿನ್ವಸರ್ನಲ್ಲಿ ಸ್ಪರ್ಧಿಸಿ ಗೆದ್ದರು. 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018ರಲ್ಲಿ ಅವರು ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ ಸ್ಥಾಪಿಸಿ, ಖಿನ್ವಸರ್ನಿಂದ ಎರಡು ಬಾರಿ ಗೆದ್ದರು. ಅವರ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತಾದರೂ, ಒಂದು ವರ್ಷದ ನಂತರ ರೈತರ ಪ್ರತಿಭಟನೆಯ ಕಾರಣದಿಂದ ಬೇರೆಯಾಯಿತು. ವಸುಂಧರಾ ರಾಜೆಯಿಂದ ಎಲ್.ಕೆ. ಅಡ್ವಾಣಿಯವರೆಗೆ ಪಕ್ಷದ ಉನ್ನತ ನಾಯಕರ ವಿರುದ್ಧ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಕ್ಕಾಗಿ ಅವರನ್ನು ಕೇಸರಿ ಪಕ್ಷ ಹೊರಗಟ್ಟಿತು ಎನ್ನಲಾಗುತ್ತದೆ. ಈಗ ತಮ್ಮ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ನಾಯಕರನ್ನೂ ಬೇನಿವಾಲ್ ಹರಿತ ಮಾತುಗಳಿಂದ ಟೀಕಿಸಿದ್ದಿದೆ. ಅವರೊಮ್ಮೆ ರಾಹುಲ್ ಗಾಂಧಿ ಬಗ್ಗೆ, ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬೇನಿವಾಲ್ ಅವರ ಎಕ್ಸ್ ಖಾತೆಯೀಗ ಕಾಂಗ್ರೆಸ್ ನಾಯಕರ ಫೋಟೊಗಳಿಂದ ತುಂಬಿದೆ. ಕಳೆದ ವರ್ಷವಷ್ಟೇ ಅವರು ಆರ್ಎಲ್ಪಿ, ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದೆಲ್ಲ ಹೇಳಿದ್ದಿತ್ತು.

ಆದರೆ ಆ ಹೊತ್ತಿನಲ್ಲಿ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಜೆಪಿ ನಾಯಕರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದರು ಮತ್ತು ಮೋದಿಗೆ ಮತ್ತೆ ಮತ ನೀಡುವಂತೆ ಕೇಳುತ್ತಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ಬೇನಿವಾಲ್ ಮೊದಲ ಐದು ವರ್ಷ ಶಾಸಕರಾಗಿದ್ದಾಗ ಅವರ ಆಸ್ತಿ ಸುಮಾರು ಶೇ.300ರಷ್ಟು ಏರಿದೆ. 2008ರಲ್ಲಿ 11 ಲಕ್ಷ ರೂ. ಇದ್ದ ಅವರ ಆಸ್ತಿ 2013ರಲ್ಲಿ 33 ಲಕ್ಷಕ್ಕೆ ಏರಿತು. 2008ರಿಂದ 2019ರ ಅವಧಿಯಲ್ಲಿ ಅವರ ಆಸ್ತಿಯಲ್ಲಿನ ಜಿಗಿತ ಶೇ.381ರಷ್ಟು. ಅನಂತರದ ಐದು ವರ್ಷಗಳಲ್ಲಿ ಆಸ್ತಿ ದ್ವಿಗುಣಗೊಂಡು 82 ಲಕ್ಷ ರೂ.ಗೆ ಏರಿತು.

 

ರಾಹುಲ್ ಕಸ್ವಾನ್:

ರಾಹುಲ್ ಕಸ್ವಾನ್ ರಾಜಸ್ಥಾನದ ಚುರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಚುರು ಕ್ಷೇತ್ರ ಕಸ್ವಾನ್ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆ. ದಶಕಗಳಿಂದ ಲೋಕಸಭೆಗೆ ಮೂರು ತಲೆಮಾರುಗಳನ್ನು ಆಯ್ಕೆ ಮಾಡಿರುವ ಕ್ಷೇತ್ರ ಇದು. ರಾಹುಲ್ ಕಸ್ವಾನ್, ಅವರ ತಂದೆ ರಾಮ್ ಸಿಂಗ್ ಕಸ್ವಾನ್ ಮತ್ತು ಅಜ್ಜ ದೀಪಚಂದ್ ಕಸ್ವಾನ್ ಇಲ್ಲಿಂದ ಸಂಸದರಾದವರು. 2014ರಲ್ಲಿ ರಾಹುಲ್ ಕಸ್ವಾನ್ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿ, ಬಿಎಸ್ಪಿಯ ಅಭಿನೇಶ್ ಮಹರ್ಷಿ ಅವರನ್ನು 2.9 ಲಕ್ಷ ಮತಗಳ ದಾಖಲೆ ಅಂತರದಿಂದ ಸೋಲಿಸಿ ಆಯ್ಕೆಯಾದಾಗ ಅತ್ಯಂತ ಕಿರಿಯ ಸಂಸದ ಎನ್ನಿಸಿಕೊಂಡಿದ್ದರು. 2019ರ ಚುನಾವಣೆಯಲ್ಲಿ ಪುನಃ ಗೆದ್ದರು. ಬಿಜೆಪಿಯ ವಸುಂಧರಾ ರಾಜೆ ಅವರಿಗೆ ಹತ್ತಿರವಾಗಿದ್ದ ಅವರ ರಾಜಕೀಯ ಹಾದಿ ಅವರ ತಂದೆ ಮತ್ತು ಅಜ್ಜನಂತೆಯೇ ಇದೆ. ಇಬ್ಬರೂ ಹಿರಿಯ ಬಿಜೆಪಿ ಜಾಟ್ ನಾಯಕರಾಗಿದ್ದರು. ಕಸ್ವಾನ್ ಅವರ ಎಕ್ಸ್ ಖಾತೆಯಲ್ಲಿ ಮೋದಿ ಗುಣಗಾನವೇ ತುಂಬಿತ್ತು. ಆದರೆ ಈ ಲೋಕಸಭೆ ಚುನಾವಣೆಗೆ ಬಿಜೆಪಿ ಚುರು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದಾಗ ಕಸ್ವಾನ್ ಪಾಲಿಗೆ ಆಘಾತ ಕಾದಿತ್ತು.

2016ರ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಜಾರಿಯಾ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು.

ಒಂದು ವಾರದ ಬಳಿಕ ಅವರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಫೋಟೊಗಳಿಗೆ ಪೋಸ್ ನೀಡಿದರು. ಬಿಜೆಪಿ ತೊರೆದಿರುವುದಾಗಿಯೂ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಘೋಷಿಸಿದರು. ಅವರ ಒಟ್ಟು ಆಸ್ತಿ 2014ರಲ್ಲಿ 2.57 ಕೋಟಿ ರೂ.ಇದ್ದದ್ದು 2019ರಲ್ಲಿ ರೂ. 3.67 ಕೋಟಿಗೆ ಏರಿದೆ. ತಮ್ಮ ಎಕ್ಸ್ ಖಾತೆಯಲ್ಲಿ ತುಂಬಿ ತುಳುಕುತ್ತಿರುವ ಮೋದಿ ಮತ್ತು ಬಿಜೆಪಿ ಗುಣಗಾನವನ್ನು ಅವರಿನ್ನೂ ಡಿಲೀಟ್ ಮಾಡಿಲ್ಲ.

 

ಉದಯ್ ಶಂಕರ್ ಹಝಾರಿಕಾ:

ಉದಯ್ ಶಂಕರ್ ಹಝಾರಿಕಾ ಅವರು ಲಖಿಂಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಅವರು 1998, 1999 ಮತ್ತು 2004ರಲ್ಲಿ ಬಿಜೆಪಿಯಿಂದ ಲಖಿಂಪುರದಲ್ಲಿ ಸ್ಪರ್ಧಿಸಿದ್ದರು. ಆದರೆ ಯಾವತ್ತೂ ಗೆದ್ದದ್ದಿಲ್ಲ. ಕಡೆಗೆ 2024ರ ಡಿಸೆಂಬರ್ನಲ್ಲಿ ಬಿಜೆಪಿ ತೊರೆದರು. ಈ ಚುನಾವಣೆಯಲ್ಲಿ ಅವರು ಲಖಿಂಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಹಾಲಿ ಬಿಜೆಪಿ ಸಂಸದ ಪ್ರಧಾನ್ ಬರುವಾ ಅವರನ್ನು ಎದುರಿಸಲಿದ್ದಾರೆ.

ಹಝಾರಿಕಾ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಅವರ ಆಸ್ತಿ ಕಳೆದ ಎಂಟು ವರ್ಷಗಳಲ್ಲಿ ಶೇ.218ರಷ್ಟು ಹೆಚ್ಚಿದೆ. 2016ರಲ್ಲಿ 3.77 ಕೋಟಿ ರೂ. ಇದ್ದದ್ದು 2024ರಲ್ಲಿ 11.8 ಕೋಟಿ ರೂ.ಗೆ ಏರಿದೆ.

ಪಕ್ಷಾಂತರ ನಿಷೇಧ ಕಾಯ್ದೆಯೇನೋ ಇದೆ. ಆದರೆ ಕೇಂದ್ರದಲ್ಲಿ ಆಳುವ ಪಕ್ಷವೇ ಪಕ್ಷಾಂತರವನ್ನು ಮಾಡಿಸುವಾಗ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಅಲ್ಲದೆ, ಕಾನೂನಿನೊಳಗೇ ಇರಬಹುದಾದ ದೌರ್ಬಲ್ಯವನ್ನೂ ಬಳಸಿಕೊಳ್ಳಲಾಗುತ್ತದೆ. ಇನ್ನು ಚುನಾಯಿತ ಸರಕಾರವನ್ನು ಉರುಳಿಸುವ ಸಂದರ್ಭದಲ್ಲಂತೂ, ಪಕ್ಷದ ಮೂರನೇ ಎರಡರಷ್ಟು ಶಾಸಕರು ತೊರೆದರೆ ಆಗ ಪಕ್ಷಾಂತರ ವಿರೋಧಿ ಕಾನೂನೇ ಅನ್ವಯಿಸುವುದಿಲ್ಲ.

ಅಂತೂ ಆಟ ಆಡಲೇಬೇಕೆಂದುಕೊಂಡವರು, ಹೇಗೂ ಆಟ ಆಡಬಲ್ಲರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News