ಲೋಕಸಭೆ ಚುನಾವಣೆ: ಕರ್ನಾಟಕ ಕಾಂಗ್ರೆಸ್ ಎದುರಿನ ಸವಾಲುಗಳು, ಬಿಜೆಪಿ-ಜೆಡಿಎಸ್ ತಂತ್ರಗಳು

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ. ಕಳೆದ 20 ವರ್ಷಗಳಿಂದ ಲೋಕಸಭೆ ಕಣದಲ್ಲಿ ಹಿನ್ನಡೆ ಕಾಣುತ್ತಲೇ ಬಂದಿರುವ ಕಾಂಗ್ರೆಸ್ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದ ಭಾರೀ ಒತ್ತಡದಲ್ಲಿದೆ. ಸ್ವತಃ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಆ ಹಾದಿಯಲ್ಲಿ ಕಾಂಗ್ರೆಸ್‌ಗೆ ಇರುವ ಸವಾಲುಗಳೇನು? ವಿಧಾನಸಭೆ ಚುನಾವಣೆಯಲ್ಲಿ ಸೋತ ಹತಾಶೆಯಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಹೇಗೆ ಕಾಂಗ್ರೆಸ್ ವಿರುದ್ಧ ತಂತ್ರ ಹೂಡಿವೆ? ಸಮೀಕ್ಷೆಗಳು ಹೇಳುತ್ತಿರುವುದೇನು ಮತ್ತು ರಾಜಕೀಯ ಲೆಕ್ಕಾಚಾರಗಳೇನು?

Update: 2024-02-27 04:48 GMT
Editor : Thouheed | Byline : ಆರ್.ಜೀವಿ

ಕರ್ನಾಟಕದ ಪ್ರಮುಖ ಪಕ್ಷಗಳು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್. 1952ರ ಮೊದಲ ಚುನಾವಣೆಯಿಂದ 1991ರ ಚುನಾವಣೆಯವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಪ್ರಾಬಲ್ಯ ಸಾಧಿಸಿತ್ತು. ಆದರೆ 1996ರಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿತು. ಅದಾದ ಬಳಿಕ 1999ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವುದು ಸಾಧ್ಯವಾಯಿತು. ಅದೇ ಕೊನೆ. ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯನ್ನೇ ಅನುಭವಿಸುತ್ತ ಬಂದಿದೆ. ಹಾಗಾಗಿಯೇ ಈ ಸಲದ ಚುನಾವಣೆ ಅದಕ್ಕೆ ಬಹಳ ಮಹತ್ವದ್ದೂ ಆಗಿದೆ. ಹೆಚ್ಚು ಸೀಟುಗಳನ್ನು ಗೆಲ್ಲಬೇಕಿರುವುದು ಪ್ರತಿಷ್ಠೆಯ ವಿಚಾರ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.

1952ರಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿದ್ದ ಒಟ್ಟು ಕ್ಷೇತ್ರಗಳು 11. ಕಾಂಗ್ರೆಸ್ 10ರಲ್ಲಿ ಗೆದ್ದಿದ್ದರೆ, ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) 1 ಸ್ಥಾನ ಗೆದ್ದಿತ್ತು. 1957ರಲ್ಲಿ ಲೋಕಸಭಾ ಸ್ಥಾನಗಳು 26 ಆದವು. ಕಾಂಗ್ರೆಸ್ 23, ಪ್ರಜಾ ಸೋಷಲಿಸ್ಟ್ ಪಾರ್ಟಿ (ಪಿಎಸ್‌ಪಿ) 1, ಎಸ್‌ಸಿಎಫ್ 1, ಸ್ವತಂತ್ರ 1. 1962ರಲ್ಲಿ ಕಾಂಗ್ರೆಸ್ 25, ಲೋಕ ಸೇವಕ್ ಸಂಘ (ಎಲ್‌ಎಸ್‌ಎಸ್) 1. 1967ರಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 27ಕ್ಕೆ ಏರಿತು. ಕಾಂಗ್ರೆಸ್ 18, ಸ್ವತಂತ್ರ ಪಾರ್ಟಿ (ಎಸ್‌ಡಬ್ಲ್ಯುಪಿ) 5, ಪಿಎಸ್‌ಪಿ 2, ಸಂಯುಕ್ತ ಸೋಷಲಿಸ್ಟ್ ಪಾರ್ಟಿ (ಎಸ್‌ಎಸ್‌ಪಿ) 1, ಸ್ವತಂತ್ರ 1. 1971ರಲ್ಲಿ ಎಲ್ಲ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 1977ರಿಂದ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ಆಯಿತು. ಆ ಚುನಾವಣೆಯಿಂದ ಸತತ ಮೂರು ಅವಧಿಗೆ ಕಾಂಗ್ರೆಸ್‌ಗೆ ಎದುರಾಳಿಯಾಗಿದ್ದದ್ದು ಜನತಾ ಪಕ್ಷ. ಕಾಂಗ್ರೆಸ್ 26, ಜನತಾ ಪಕ್ಷ 2. 1980ರಲ್ಲಿ ಕಾಂಗ್ರೆಸ್ 27, ಜನತಾ ಪಕ್ಷ 1. 1984ರಲ್ಲಿ ಕಾಂಗ್ರೆಸ್ 24, ಜನತಾ ಪಕ್ಷ 4. 1989ರಲ್ಲಿ ಕಾಂಗ್ರೆಸ್ 26, ಜನತಾ ದಳ 2. 1991ರಲ್ಲಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ನೆಲೆ ಕಂಡುಕೊಂಡಿತು. ಕಾಂಗ್ರೆಸ್ 23, ಬಿಜೆಪಿ 4, ಜನತಾ ಪಕ್ಷ 1. 1996ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ದೊಡ್ಡ ಹಿನ್ನಡೆ ಅನುಭವಿಸಿತ್ತು. ಆ ಚುನಾವಣೆಯಲ್ಲಿ ಜನತಾ ದಳ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿತ್ತು. ಜನತಾ ದಳ 16, ಬಿಜೆಪಿ 6, ಕಾಂಗ್ರೆಸ್ 5, ಕೆಸಿಪಿ 1. 1998ರಲ್ಲಿ ಬಿಜೆಪಿ ಮೊದಲ ಬಾರಿಗೆ ಅತಿ ಹೆಚ್ಚು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು. ಬಿಜೆಪಿ 13, ಕಾಂಗ್ರೆಸ್ 9, ಲೋಕಶಕ್ತಿ 3, ಜನತಾ ದಳ 3. 1999ರಲ್ಲಿ ಕಾಂಗ್ರೆಸ್ 18, ಬಿಜೆಪಿ 7, ಜೆಡಿಯು 3.

2004ರಿಂದ ಬಿಜೆಪಿಯೇ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ. ಆ ಚುನಾವಣೆಯಲ್ಲಿ ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2. 2009ರಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3. 2014ರಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2. 2019ರಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಸ್ವತಂತ್ರ 1.

ಪ್ರಸಕ್ತ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾನ್ಯ ಕ್ಷೇತ್ರಗಳು 21; ಎಸ್‌ಸಿ ಮೀಸಲು ಕ್ಷೇತ್ರಗಳು 5; ಎಸ್‌ಟಿ ಮೀಸಲು ಕ್ಷೇತ್ರಗಳು 2.

ಹಿಂದಿನ 2 ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಸ್ವಲ್ಪ ವಿವರವಾಗಿ ನೋಡುವುದಾದರೆ, 2014ರಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು. ಮತ ಹಂಚಿಕೆ ಶೇ.43; ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲುವು. ಮತ ಪ್ರಮಾಣ ಶೇ.40.80; ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು. ಪಡೆದ ಮತಗಳ ಪ್ರಮಾಣ ಶೇ.11.

2019ರಲ್ಲಿ ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 25ರಲ್ಲಿ ಗೆಲುವು. ಮತ ಹಂಚಿಕೆ ಶೇ.51.75; ಕಾಂಗ್ರೆಸ್ 21ರಲ್ಲಿ ಸ್ಪರ್ಧಿಸಿ 1ರಲ್ಲಿ ಗೆಲುವು. ಮತ ಪ್ರಮಾಣ ಶೇ.32.11; ಜೆಡಿಎಸ್ 7ರಲ್ಲಿ ಸ್ಪರ್ಧಿಸಿ 1ರಲ್ಲಿ ಗೆಲುವು. ಪಡೆದ ಮತಗಳ ಪ್ರಮಾಣ ಶೇ.9.74.

ಲೋಕಸಭೆ ಚುನಾವಣೆಯ ಅಂತಿಮ ಪಟ್ಟಿಯ ಪ್ರಕಾರ ಕರ್ನಾಟಕ ರಾಜ್ಯಾದ್ಯಂತ ಇರುವ ಮತಗಟ್ಟೆಗಳು - 58,834

ರಾಜ್ಯದಲ್ಲಿನ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು, ಅಂದರೆ ಸುಮಾರು 7.17 ಲಕ್ಷ ಮತದಾರರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅತಿ ಕಡಿಮೆ, ಅಂದರೆ 1.67 ಲಕ್ಷ ಮತದಾರರಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾಹಿತಿ ನೀಡಿರುವ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 5.37 ಕೋಟಿ ಜನರು ಈಗ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಅವರಲ್ಲಿ ಸುಮಾರು 10 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವವರು.

ಸಾಮಾನ್ಯ ಮತದಾರರ ಲಿಂಗ ಅನುಪಾತ (ಪ್ರತೀ 1,000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ) 991ರಿಂದ 997ಕ್ಕೆ ಏರಿದೆ. ಯುವ ಮತದಾರರ ಲಿಂಗ ಅನುಪಾತ ಈ ಅವಧಿಯಲ್ಲಿ 818ರಿಂದ 856ಕ್ಕೆ ಏರಿಕೆಯಾಗಿದೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಸುಮಾರು 4.72 ಲಕ್ಷ ಮಾರ್ಪಾಡುಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಇಂಡಿಯಾ ಟುಡೇ ಸಮೂಹದವರು ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಸರ್ವೇ ಪ್ರಕಾರ, ರಾಜ್ಯದ 28 ಸೀಟುಗಳಲ್ಲಿ ಎನ್ ಡಿಎ 24ನ್ನು ಗೆಲ್ಲಲಿದೆ. ವಿಪಕ್ಷ ಮೈತ್ರಿಕೂಟ ಇಂಡಿಯಾ 4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿ ಶೇ.53ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಶೇ.42 ಮತಗಳನ್ನು ಪಡೆಯಲಿದೆ. ಆದರೂ ಈ ಸಮೀಕ್ಷೆ 2023ರ ಡಿಸೆಂಬರ್ 15ರಿಂದ 2024ರ ಜನವರಿ 28ರ ಮಧ್ಯೆ ನಡೆದಿರುವುದರಿಂದ, ಈಚಿನ ರಾಜಕೀಯ ಬೆಳವಣಿಗೆಗಳು ಜನರ ಮನಃಸ್ಥಿತಿಯನ್ನು ಬದಲಿಸಿರಲೂ ಬಹುದು. ಹಾಗಾಗಿ ಈ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆ ಹೆಚ್ಚು.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸಮೀಕರಣ ಬದಲಿಸಬಲ್ಲ ಅಂಶಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯೂ ಒಂದಾದೀತೆ? ಎರಡೂ ಪಕ್ಷಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ದೊಡ್ಡ ಪೆಟ್ಟು ತಿಂದಿರುವುದರಿಂದ, ಈಗ ಜೊತೆಯಾಗಿ ಲೋಕಸಭೆ ಚುನಾವಣೆ ಎದುರಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲಾಗುವ ಉದ್ದೇಶ ಹೊಂದಿವೆ.

ಆದರೆ ಈ ಮೈತ್ರಿಯಿಂದ ಬಿಜೆಪಿಗೆ ಲಾಭವಾಗಲಿದೆಯೆ? ಜೆಡಿಎಸ್ ಗೆ ತನ್ನ ಬಲ ಹೆಚ್ಚಿಸಿಕೊಳ್ಳಲು ಮೈತ್ರಿ ನೆರವಾಗಲಿದೆಯೆ? ಬಿಜೆಪಿ ಮತ್ತು ಜೆಡಿಎಸ್ ಲಿಂಗಾಯತರು ಮತ್ತು ಒಕ್ಕಲಿಗರ ಬೆಂಬಲವನ್ನು ಹೊಂದಿವೆ. ಸಂಖ್ಯಾಬಲದಲ್ಲಿ ಇವೆರಡೂ ರಾಜ್ಯದ ಪ್ರಬಲ ಸಮುದಾಯಗಳು. ಈ ಅಂಶದ ಹಿನ್ನೆಲೆಯಲ್ಲಿ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಬಹುದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳಾಗಿ ಬಿಜೆಪಿ ಎದುರು ಸ್ಪರ್ಧಿಸಿ ಹೀನಾಯವಾಗಿ ಸೋಲುಂಡಿದ್ದವು. ಎರಡೂ ಪಕ್ಷಗಳು ತಲಾ ಒಂದು ಸ್ಥಾನ ಮಾತ್ರ ಪಡೆದಿದ್ದವು. ಈಗ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ. ಬಿಜೆಪಿ ಜೆಡಿಎಸ್ ಒಂದಾಗಿವೆ. ಕಾಂಗ್ರೆಸ್ ವಿರುದ್ಧ ಸೆಣಸಲಿವೆ. ಈ ಬಾರಿ ಮೈತ್ರಿಕೂಟಕ್ಕೆ ಗೆಲುವಾಗಲಿದೆಯೇ? ಅಥವಾ ಆಡಳಿತಾರೂಢ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಬಾಚಿಕೊಳ್ಳಲಿದೆಯೇ?

ಎಬಿಪಿ-ಸಿವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಶೇ.42.1ರಷ್ಟು ಜನರು ಮೈತ್ರಿಯಿಂದ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದಾರೆ. ಶೇ.36.8ರಷ್ಟು ಜನರು ಬಿಜೆಪಿಗೆ ಅದರಿಂದ ಉಪಯೋಗವಿಲ್ಲ ಎಂದಿದ್ದಾರೆ. ಶೇ.21.2ರಷ್ಟು ಮತದಾರರು ಖಚಿತವಾಗಿ ಏನನ್ನೂ ಹೇಳಿಲ್ಲ. ಸಮೀಕ್ಷೆಗೆ ಒಳಪಟ್ಟವರನ್ನು ಉನ್ನತ ಶಿಕ್ಷಣ ಪಡೆದವರು, ಮಧ್ಯಮ ಮಟ್ಟದ ಶಿಕ್ಷಣ ಹೊಂದಿರುವವರು ಮತ್ತು ಕಡಿಮೆ ಶಿಕ್ಷಣ ಪಡೆದವರೆಂದು ವರ್ಗೀಕರಿಸಿಯೂ ವಿಶ್ಲೇಷಿಸಲಾಗಿದೆ.

ಈ ಮೂರೂ ವರ್ಗದವರಲ್ಲಿ ಒಟ್ಟಾರೆಯಾಗಿ ಹೆಚ್ಚು ಪ್ರತಿಶತ ಜನರು ಮೈತ್ರಿಯಿಂದ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದಾರೆ. ಅದಕ್ಕಿಂತ ಸ್ವಲ್ಪ ಕಡಿಮೆ ಸಂಖ್ಯೆಯ ಮಂದಿ ಚುನಾವಣೆಯಲ್ಲಿ ಮೈತ್ರಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದ್ದಾರೆ.

ಕಾಂಗ್ರೆಸ್ ವಿಶ್ವಾಸ ಮತ್ತು ಸವಾಲುಗಳ ಬಗ್ಗೆ ನೋಡುವುದಾದರೆ, ಕಾಂಗ್ರೆಸ್ ಏನಿಲ್ಲವೆಂದರೂ 20 ಸೀಟುಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಮಾತ್ರವೇ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು. ಆದರೆ ಈ ಸಲ ಅದರದ್ದೇ ಸರಕಾರ ರಾಜ್ಯದಲ್ಲಿರುವುದು ಗೆಲುವಿಗೆ ಅನುಕೂಲಕರವಾದೀತು. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಗೆಲ್ಲಲೇಬೇಕಾದ ಅನಿವಾರ್ಯವೂ ಕಾಂಗ್ರೆಸ್‌ಗೆ ಈ ಬಾರಿ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಚಯಿಸಿರುವ ಗ್ಯಾರಂಟಿಗಳು ದೇಶದಲ್ಲಿಯೇ ಮಾದರಿಯೆನ್ನಿಸಿರುವುದರಿಂದ, ಅದೇ ತಂತ್ರ ಲೋಕಸಭೆ ಚುನಾವಣೆಯಲ್ಲಿಯೂ ಒಂದು ಮಟ್ಟಿನ ಪ್ರಭಾವವನ್ನಂತೂ ಬೀರುವ ಸಾಧ್ಯತೆ ಇದ್ದೇ ಇದೆ.

ಬಿಜೆಪಿ-ಜೆಡಿಎಸ್ ನಡುವೆ ಸೀಟು ಹೊಂದಾಣಿಕೆಯೂ ಸುಲಭವಾಗಿ ಆಗುವಂತೆ ಕಾಣುತ್ತಿಲ್ಲ. ಜೆಡಿಎಸ್‌ಗೆ ನಾಲ್ಕೈದು ಸ್ಥಾನಗಳ ಮೇಲೆ ಕಣ್ಣಿತ್ತು. ಆದರೆ ಬಿಜೆಪಿ ಎರಡೇ ಸ್ಥಾನ ಬಿಟ್ಟು ಕೊಡುವ ಬಗ್ಗೆ ಯೋಚಿಸುತ್ತಿದೆ. ಜೆಡಿಎಸ್‌ಗೆ ಇದರಲ್ಲಿ ಹೆಚ್ಚಿನ ಆಯ್ಕೆಯೂ ಇಲ್ಲವಾಗಿದೆ. ಹಾಸನ, ಕೋಲಾರ ಜೊತೆ ಮಂಡ್ಯ ಬೇಕು ಎನ್ನುತ್ತಿದೆ ಜೆಡಿಎಸ್. ಬಿಜೆಪಿ ಇನ್ನೂ ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ.

ಚುನಾವಣೆ ಹತ್ತಿರವಾಗುತ್ತಿರುವಂತೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಹೂಡುವ ತಂತ್ರಗಳು ಏನಿರಲಿವೆಯೋ ಗೊತ್ತಿಲ್ಲ. ಬಿಜೆಪಿ ಆಪರೇಷನ್ ಹಸ್ತದಲ್ಲಿ ತೊಡಗಿದರೂ ಅಚ್ಚರಿಯಿಲ್ಲ. ಕಾಂಗ್ರೆಸ್ ಅದನ್ನೆಲ್ಲ ನಿರೀಕ್ಷಿಸಿರದೇ ಇಲ್ಲ. ಪ್ರತಿ ತಂತ್ರಗಾರಿಕೆಗೂ ಅದು ಸಜ್ಜಾಗಿರುವಂತಿದೆ. ಇದೆಲ್ಲದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಸವಾಲು ಕೂಡ ಸಣ್ಣದಲ್ಲ. ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಗೆಲುವಿನ ಹಾದಿಯನ್ನು ಕಾಂಗ್ರೆಸ್ ತೆರೆಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News