ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಸರಿಯಲ್ಲ: ಬಿ.ಶ್ರೀರಾಮುಲು
"ಸ್ಟಿಂಗ್ ಆಪರೇಷನ್ ವಿಡಿಯೊ ಪ್ರಕರಣ ಸಿಬಿಐಗೆ ವಹಿಸಿ"
ಹೊಸಪೇಟೆ/ವಿಜಯನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಆಧುನಿಕ ತಂತ್ರಜ್ಞಾನ ಬಳಸಿ ವೀಡಿಯೊ ಮತ್ತು ಆಡಿಯೊಗಳನ್ನು ಎಡಿಟ್ ಮಾಡಿ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಿಂದುಳಿದ ವರ್ಗದ ಪ್ರಬಲ ನಾಯಕನ ವೈಯಕ್ತಿಕ ಜೀವನಕ್ಕೆ ಚ್ಯುತಿ ತರುವ ಪ್ರಯತ್ನ ಸರಿಯಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಹೊಸಪೇಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವೀಡಿಯೊವನ್ನು ತಾವು ನೋಡಿಲ್ಲ. ಆದರೆ, ವೀಡಿಯೊ ಇದೆ ಎಂಬ ವಿಚಾರವನ್ನೇ ಮುಂದಿಟ್ಟುಕೊಂಡು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ, ರಾಜಣ್ಣ ಸೇರಿದಂತೆ ಹಲವು ರಾಜಕಾರಣಿಗಳ ಚಾರಿತ್ರ್ಯಹರಣಕ್ಕೆ ಇದೇ ರೀತಿಯ ಪ್ರಯತ್ನಗಳು ನಡೆದಿವೆ. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ. ರಿಯಲ್ ಎಸ್ಟೇಟ್ ಉದ್ಯಮದ ಮಾದರಿಯಲ್ಲೇ ಸಿಡಿ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀರಾಮುಲು ಟೀಕಿಸಿದರು.
ಸಿದ್ದರಾಮಯ್ಯ ಅವರು ಸಾಮಾನ್ಯ ಹಿಂದುಳಿದ ವರ್ಗದಿಂದ ಬೆಳೆದು ಬಂದ ಮಹಾನ್ ನಾಯಕ. ಪಕ್ಷಾತೀತವಾಗಿ ನೋಡಿದರೂ ಇಂತಹ ರಾಜಕಾರಣಿಗಳು ರಾಜ್ಯಕ್ಕೆ ಸಿಗುವುದು ಅಪರೂಪ. ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರ ವೈಯಕ್ತಿಕ ಜೀವನದ ಬಗ್ಗೆ ಹಗುರವಾಗಿ ಮಾತನಾಡುವುದು ಅಥವಾ ವೀಡಿಯೊಗಳನ್ನು ಸೃಷ್ಟಿಸಿ ಅಪಮಾನಿಸುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇಂತಹ ಗಂಭೀರ ಸಮಸ್ಯೆಗಳತ್ತ ಗಮನಹರಿಸುವ ಬದಲು ಸಿಡಿ ರಾಜಕಾರಣದಲ್ಲಿ ತೊಡಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂಬುದು ತಮ್ಮ ಅಭಿಪ್ರಾಯವಾಗಿದೆ. ಈ ಕುರಿತು ಕೇಂದ್ರದ ನಾಯಕರೊಂದಿಗೆ ಮಾತನಾಡುವುದಾಗಿಯೂ ತಿಳಿಸಿದ ಶ್ರೀರಾಮುಲು, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು ಎಂದು ಒತ್ತಾಯಿಸಿದರು.