ವಿಜಯನಗರ (ಹೊಸಪೇಟೆ) : ದೇಹಕ್ಕೆ ಕಾಯಿಲೆ ಬರುವುದು ಎಷ್ಟು ಸಹಜವೋ, ಮನಸ್ಸಿಗೆ ಆಯಾಸ ಅಥವಾ ಖಿನ್ನತೆ ಉಂಟಾಗುವುದೂ ಅಷ್ಟೇ ಸಹಜ. ಇದಕ್ಕೆ ಯಾರೂ ಅಂಜಬೇಕಿಲ್ಲ. ಸಂಕೋಚಪಡದೆ ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆ ಹಾಗೂ ಸಂಕ್ಲಾಪುರದ ಟಿಎಂಎಸ್ ಸೊಸೈಟಿ ಕಾಲೇಜ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವಿಜಯ ವಿಠಲ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಾಸ್ತವ ಅನುಭವಗಳ ಆಲಿಕೆ, ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಈ ಬಾರಿಯ ಘೋಷವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಯೋಜಿಸಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಒತ್ತಡ, ಪರೀಕ್ಷೆಯ ಭಯ, ಭವಿಷ್ಯದ ಚಿಂತೆ ಹಾಗೂ ಪೋಷಕರ ನಿರೀಕ್ಷೆಗಳ ಭಾರದ ಕುರಿತು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದರಿಂದ ಯುವಜನರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದರು.

ಸಮಾಜದಲ್ಲಿ ಮಾನಸಿಕ ಖಿನ್ನತೆಯನ್ನು ಮುಚ್ಚಿಡುವ ಅಥವಾ ಅದನ್ನು ಕಳಂಕವಾಗಿ ನೋಡುವ ಕೆಟ್ಟ ಪದ್ಧತಿಯನ್ನು ತೊಡೆದುಹಾಕಬೇಕು. ಯಾವುದೇ ಮಾನಸಿಕ ಸಮಸ್ಯೆ ಎದುರಾದಾಗ ಅಥವಾ ಅತಿಯಾದ ಒತ್ತಡ ಅನುಭವಿಸಿದಾಗ ಸ್ನೇಹಿತರು, ತಂದೆ-ತಾಯಿ ಅಥವಾ ಆಪ್ತ ಸಮಾಲೋಚಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಮಾತನಾಡುವುದರಿಂದ ಮನಸ್ಸಿನ ಭಾರ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ದೈನಂದಿನ ಜೀವನದಲ್ಲಿ ಯೋಗ, ಧ್ಯಾನ, ದೈಹಿಕ ವ್ಯಾಯಾಮ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ರಾತ್ರಿ ವೇಳೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸಮರ್ಪಕ ನಿದ್ರೆ ಮಾಡುವುದು ಮೆದುಳಿನ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ ಎಂದರು.

ಮಾನಸಿಕ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆ ಸದಾ ಸಿದ್ಧವಿದ್ದು, ಜಿಲ್ಲಾ ಮಟ್ಟದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ‘ಟೆಲಿ-ಮಾನಸ್’ನಂತಹ ಉಚಿತ ಸಹಾಯವಾಣಿ ಸೇವೆಗಳು ಲಭ್ಯವಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬದುಕಿ, ಜೀವನದ ಪ್ರತಿ ಸವಾಲನ್ನೂ ಧೈರ್ಯವಾಗಿ ಎದುರಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಶಾಂತ ನಾಗಲಾಪುರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ್ ನಾಗರಾಜ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಧಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor