ವಿಜಯನಗರ (ಹೊಸಪೇಟೆ) : ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ನಿರ್ವಹಣೆ ಹಾಗೂ ವಿಶ್ವ ಪಾರಂಪರಿಕ ತಾಣದ ಮಾರ್ಗಸೂಚಿಗಳ ಪಾಲನೆ ಕುರಿತು ಪರಿಶೀಲನೆ ನಡೆಸಲು ಯುನೆಸ್ಕೊ ತಜ್ಞರ ತಂಡ ಅಕ್ಟೋಬರ್ 24ರಂದು ಹಂಪಿಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುನೆಸ್ಕೊ ತಂಡವು ಅಕ್ಟೋಬರ್ 22ರಂದು ದೆಹಲಿಗೆ ಆಗಮಿಸಲಿದ್ದು, ಅಕ್ಟೋಬರ್ 24ರಂದು ಹಂಪಿಗೆ ಭೇಟಿ ನೀಡಲಿದೆ. ಅಕ್ಟೋಬರ್ 27ರವರೆಗೆ ಹಂಪಿ ಹಾಗೂ ಸುತ್ತಮುತ್ತಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಅಂತರರಾಷ್ಟ್ರೀಯ ಪಾರಂಪರಿಕ ತಜ್ಞರಾದ ಜಾರ್ಜ್ ಅಬುಂಗ್, ಇಚಿಟ ಶಿಮೊಡ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ಅವರನ್ನೊಳಗೊಂಡ ತಂಡವು ಹಂಪಿಯ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು ಹಾಗೂ ಪ್ರಾಚೀನ ಅವಶೇಷಗಳ ಸಂರಕ್ಷಣೆಯ ಸ್ಥಿತಿಗತಿಗಳನ್ನು ಅವಲೋಕಿಸಲಿದೆ ಎಂದರು.

ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸ, ವಾಸ್ತುಶಿಲ್ಪದ ವೈಭವ ಹಾಗೂ ಅಪಾರ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಹಂಪಿಯ ಸಂರಕ್ಷಣೆಯ ದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಸ್ಮಾರಕಗಳ ನಿರ್ವಹಣೆ, ವಿಶ್ವ ಪಾರಂಪರಿಕ ತಾಣದ ನಿಯಮಗಳ ಪಾಲನೆ ಹಾಗೂ ಪಾರಂಪರಿಕ ತಾಣದ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಪರಿಶೀಲನೆಗೆ ಈ ಭೇಟಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹಂಪಿಯ ಐತಿಹಾಸಿಕ ಮಹತ್ವಕ್ಕೆ ಧಕ್ಕೆಯಾಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು, ಪ್ರಾಚೀನ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಹಾಗೂ ಪಾರಂಪರಿಕ ತಾಣದ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ತಂಡದ ಪರಿಶೀಲನೆ ಮಹತ್ವದ್ದಾಗಿದೆ. ತಂಡದ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಬೇಸಿಗೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ :

ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಪತ್ಕಾಲೀನ ಯೋಜನೆ (ಕಂಟಿಂಜೆನ್ಸಿ ಪ್ಲಾನ್) ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವ ಪ್ರದೇಶಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಟ್ರ್ಯಾಕ್ಟರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅಗತ್ಯ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ರೈತರಿಗೆ ಅಗತ್ಯ ಮಾರ್ಗದರ್ಶನ :

ಬೇಸಿಗೆಯ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗುವುದು. ರೈತ ಸಂಪರ್ಕ ಕೇಂದ್ರಗಳನ್ನು ಸಕ್ರಿಯಗೊಳಿಸಿ, ಮುಂದಿನ ದಿನಗಳಲ್ಲಿ ರೈತರಿಗೆ ಸೂಕ್ತ ಬೆಳೆಗಳ ಆಯ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಇ. ಬಾಲಕೃಷ್ಣಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor