Vijayanagara | ಟಿಎಂಎಇಎಸ್ ಪಾಲಿಟೆಕ್ನಿಕ್ನಲ್ಲಿ ಜೆಎಸ್ಡಬ್ಲ್ಯೂ ಲಿಮಿಟೆಡ್ನಿಂದ ಪೂಲ್ ಕ್ಯಾಂಪಸ್ ನೇಮಕಾತಿ
ಹೊಸಪೇಟೆ/ವಿಜಯನಗರ: ಕೈಗಾರಿಕೆಗಳಿಗೆ ಅಗತ್ಯವಿರುವ ತಾಂತ್ರಿಕ ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ, ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರುವ ಟಿಎಂಎಇಎಸ್ ಪಾಲಿಟೆಕ್ನಿಕ್ನಲ್ಲಿ ಬುಧವಾರ ಜೆಎಸ್ಡಬ್ಲ್ಯೂ ಲಿಮಿಟೆಡ್, ತೋರಣಗಲ್ಲು ಇವರ ಸಹಯೋಗದೊಂದಿಗೆ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಯಿತು.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ನೇಮಕಾತಿ ಪ್ರಕ್ರಿಯೆಯಲ್ಲಿ ಆನ್ಲೈನ್ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಟಿಎಂಎಇಎಸ್ ಪಾಲಿಟೆಕ್ನಿಕ್ ಮತ್ತು ಎಸ್ಎಂವಿ ಪಾಲಿಟೆಕ್ನಿಕ್, ಹೊಸಪೇಟೆ, ಸರ್ಕಾರಿ ಪಾಲಿಟೆಕ್ನಿಕ್, ಕಂಪ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಸೇರಿದಂತೆ ನಾಲ್ಕು ಪಾಲಿಟೆಕ್ನಿಕ್ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಮೆಟಲರ್ಜಿಕಲ್ ಹಾಗೂ ಮೈನಿಂಗ್ ಎಂಜಿನಿಯರಿಂಗ್ ವಿಭಾಗಗಳಿಗೆ ಸೇರಿದ ಒಟ್ಟು 119 ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಟಿಎಂಎಇಎಸ್ ಪಾಲಿಟೆಕ್ನಿಕ್ನ ಉದ್ಯೋಗ ನಿಯೋಜನಾಧಿಕಾರಿಗಳಾದ ಟಿ. ನಜೀರುದ್ದೀನ್ ಮತ್ತು ಯೋಗಾನಂದ ಟಿ.ಎಲ್. ಹಣಮಣಾಲ್ ಅವರು ಆಯ್ಕೆ ಪ್ರಕ್ರಿಯೆಯ ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಎಚ್.ಕೆ. ಶಂಕರಾನಂದ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಜೆಎಸ್ಡಬ್ಲ್ಯೂ ಲಿಮಿಟೆಡ್, ತೋರಣಗಲ್ಲಿನ ಮಾನವ ಸಂಪನ್ಮೂಲ ವ್ಯವಸ್ಥಾಪಕ ನಾಗೇಶ್ ಅವರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು, ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವುದು ಹಾಗೂ ವಿದ್ಯಾರ್ಥಿಗಳ ಉದ್ಯೋಗ ನೇಮಕಾತಿಗೆ ಉತ್ತೇಜನ ನೀಡುವುದು ಇಂತಹ ಪೂಲ್ ಕ್ಯಾಂಪಸ್ ನೇಮಕಾತಿಗಳ ಪ್ರಮುಖ ಉದ್ದೇಶವಾಗಿದೆ.