ಬರ ಅಧ್ಯಯನಕ್ಕೆ ವಿಜಯನಗರಕ್ಕೆ ಬಿಜೆಪಿ ತಂಡ: ರೈತರ ಅಳಲು ಆಲಿಸಿದ ಆರ್. ಅಶೋಕ್

Update: 2026-07-30 20:24 IST

ಹೊಸಪೇಟೆ /ವಿಜಯನಗರ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ರಚಿಸಲಾದ ಬರ ಅಧ್ಯಯನ ತಂಡವು ಗುರುವಾರ ವಿಜಯನಗರ ಜಿಲ್ಲೆಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಪರಿಶೀಲಿಸಿತು. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡವು ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿ, ಮಳೆಯ ಕೊರತೆಯಿಂದ ಒಣಗಿರುವ ಸೂರ್ಯಕಾಂತಿ ಹಾಗೂ ತೊಗರಿ ಬೆಳೆಗಳನ್ನು ವೀಕ್ಷಿಸಿ ರೈತರ ಸಮಸ್ಯೆಗಳನ್ನು ಆಲಿಸಿತು.

ಹೊಲದಲ್ಲಿ ನೆಲಬಿಟ್ಟು ಮೇಲೆಳೆದಿದ್ದ ಬೆಳೆಗಳನ್ನು ಪರಿಶೀಲಿಸಿದ ಆರ್. ಅಶೋಕ್, ರೈತ ಮಹಿಳೆ ಹಾಗೂ ಸ್ಥಳೀಯ ರೈತರಿಂದ ಬರಗಾಲದ ತೀವ್ರ ಪರಿಣಾಮಗಳ ಕುರಿತು ಮಾಹಿತಿ ಪಡೆದರು. ಇದೇ ವೇಳೆ ತಹಶೀಲ್ದಾರರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಂದ ಬೆಳೆ ಹಾನಿ, ಮಳೆ ಕೊರತೆ ಮತ್ತು ಸರ್ಕಾರದ ಪರಿಹಾರ ಕ್ರಮಗಳ ಕುರಿತು ವಿವರಗಳನ್ನು ಪಡೆದರು.

ಈ ಸಂದರ್ಭದಲ್ಲಿ ಕೆಲ ರೈತರು ಮೋಟಾರ್ ಹಾಗೂ ಪಂಪ್‌ಸೆಟ್ ಅಳವಡಿಕೆಗೆ ಸಂಬಂಧಿಸಿದ ಅನುಮತಿಗಾಗಿ ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ ಎಂದು ಆರ್. ಅಶೋಕ್ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆರೋಪಗಳಿಗೆ ಸಂಬಂಧಿಸಿದಂತೆ ಲಿಖಿತ ದೂರು ನೀಡುವಂತೆ ರೈತರಿಗೆ ಸೂಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು, ಬೆಳೆ ಹಾನಿಯ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.

ಈ ಭೇಟಿ ಸಂದರ್ಭದಲ್ಲಿ ಶಾಸಕ ಕೃಷ್ಣ ನಾಯಕ್, ಮಾಜಿ ಶಾಸಕ ಬಂಗಾರು ಹನುಮಂತು ಸೇರಿದಂತೆ ಬಿಜೆಪಿ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News