Harapanahalli | ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಿಸಿ: ಎಸ್ಪಿ ಜಾಹ್ನವಿ ಕರೆ
‘ಆಪರೇಷನ್ ರೈಸ್’ ಹಾಗೂ ‘ಬೇಡ ಬ್ರೋ’ ಅಭಿಯಾನಕ್ಕೆ ಚಾಲನೆ
ಹರಪನಹಳ್ಳಿ: ಇಂದಿನ ಯುವಜನರು ಮಾದಕ ವಸ್ತುಗಳ ಬಳಕೆಯಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ (ಎಸ್ಪಿ) ಜಾಹ್ನವಿ ಕರೆ ನೀಡಿದರು.
ನಗರದ ಹೊಸಪೇಟೆ ರಸ್ತೆಯಲ್ಲಿರುವ ಡಾ. ಬಾಬು ಜಗಜೀವನರಾಂ ಸಭಾಂಗಣದಲ್ಲಿ ಹರಪನಹಳ್ಳಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಡ್ರಗ್ಸ್ ಮುಕ್ತ ಕರ್ನಾಟಕ’, ‘ಆಪರೇಷನ್ ರೈಸ್’ ಹಾಗೂ ‘ಬೇಡ ಬ್ರೋ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಬಳಕೆ ಯುವಕರ ಭವಿಷ್ಯವನ್ನು ಹಾಳು ಮಾಡುವುದರ ಜೊತೆಗೆ ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯುವಕರು ಇಂತಹ ದುಶ್ಚಟಗಳಿಂದ ದೂರವಿದ್ದು ಜಾಗೃತ ಜೀವನ ನಡೆಸಬೇಕು ಎಂದು ಹೇಳಿದರು.
ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದರ ಜೊತೆಗೆ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಸಮಾಜದ ಎಲ್ಲ ವರ್ಗದವರು ಮಾದಕ ವಸ್ತುಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಚೇತನ್ ಸಂಪ್ರದಾಯ ಅವರು, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಯುವಕರು ತಮ್ಮ ಜೀವನದ ಗುರಿಗಳತ್ತ ಗಮನಹರಿಸಿ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಮಹಾಂತೇಶ್ ಜಿ. ಸಜ್ಜನ್, ಪಿಎಸ್‌ಐಗಳಾದ ಶಂಭುಲಿಂಗ ಸಿ. ಹಿರೇಮಠ, ವಿಜಯ ಕೃಷ್ಣ, ಕೆ. ನಾಗರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ನಗರಸಭೆ ಮಾಜಿ ಸದಸ್ಯ ಲಾಟಿ ದಾದಾಪೀರ್, ಟಿಎಂಎಇ ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ್, ಪೊಲೀಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಶಾಸಕಿ ಲತಾ ಮಲ್ಲಿಕಾರ್ಜುನ ಬೆಂಬಲ :
ಮಾದಕ ವಸ್ತುಗಳು ಯುವಜನರ ಬದುಕನ್ನು ಹಾಳುಮಾಡುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಇಂತಹ ಜಾಗೃತಿ ಅಭಿಯಾನಗಳು ಸಮಾಜದಲ್ಲಿ ಉತ್ತಮ ಅರಿವು ಮೂಡಿಸುತ್ತವೆ ಎಂದು ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು. ಯುವಕರು ತಮ್ಮ ಜೀವನದ ಗುರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿಕೊಂಡು ಶಿಕ್ಷಣ, ಕ್ರೀಡೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
1908 ಸಹಾಯವಾಣಿಗೆ ಮಾಹಿತಿ ನೀಡಿ :
ಮಾದಕ ಪದಾರ್ಥಗಳ ಅಕ್ರಮ ಸಾಗಾಟ ಅಥವಾ ಮಾರಾಟದ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪೊಲೀಸ್ ಸಹಾಯವಾಣಿ 1908ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ‘ಸನ್ಮಿತ್ರ’ ಅಧಿಕಾರಿಗಳ ಮೂಲಕ ವ್ಯಸನಿಗಳಿಗೆ ಕೌನ್ಸೆಲಿಂಗ್ ಹಾಗೂ ವೈದ್ಯಕೀಯ ನೆರವು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಕಲ್ಪಿಸಲಾಗಿದೆ.
ಕಿರು ನಾಟಕದ ಮೂಲಕ ಜಾಗೃತಿ :
ಮಾದಕ ವಸ್ತುಗಳ ಬಳಕೆಯಿಂದ ಯುವಕರ ಭವಿಷ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಿರು ನಾಟಕದ ಮೂಲಕ ಪರಿಣಾಮಕಾರಿಯಾಗಿ ಪ್ರದರ್ಶಿಸಲಾಯಿತು. ಜಾಗೃತ ಜೀವನ ನಡೆಸಿ ದುಶ್ಚಟಗಳಿಂದ ದೂರವಿರಬೇಕು ಎಂಬ ಸಂದೇಶ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಯುವಜನರನ್ನು ಮಾದಕ ಪದಾರ್ಥಗಳ ಜಾಲದಿಂದ ರಕ್ಷಿಸುವುದು ಹಾಗೂ ಮಾದಕ ವಸ್ತುಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ‘ಆಪರೇಷನ್ ರೈಸ್’ ಯೋಜನೆ ಜಾರಿಗೊಳಿಸಲಾಗಿದೆ. ಡಿಜಿಟಲ್ ಜಾಲ, ನೈಟ್‌ಲೈಫ್ ಹಾಗೂ ಸ್ನೇಹಿತರ ಒತ್ತಡದಿಂದ ದಾರಿ ತಪ್ಪುತ್ತಿರುವ ಯುವಜನರಲ್ಲಿ ಜಾಗೃತಿ ಮೂಡಿಸಲು ‘ಬೇಡ ಬ್ರೋ’ ಎಂಬ ಯುವಸ್ನೇಹಿ ಅಭಿಯಾನವನ್ನು ಆರಂಭಿಸಲಾಗಿದೆ.
-ಡಾ.ಸಂತೋಷ್ ಚೌವ್ಹಾಣ್, ಡಿವೈಎಸ್ಪಿ