Vijayanagara | ಕೊಟ್ಟೂರು ಬಸ್ ನಿಲ್ದಾಣ ಎದುರು ಬೃಹತ್ ಗುಂಡಿ; ಅಪಘಾತ ಭೀತಿಯಲ್ಲಿ ಸಾರ್ವಜನಿಕರು

ದ್ವಿಚಕ್ರ ಸವಾರರು, ಪ್ರಯಾಣಿಕರ ಪರದಾಟ; ತಕ್ಷಣ ದುರಸ್ತಿ ಮಾಡಲು ಆಗ್ರಹ

Update: 2026-07-27 19:32 IST

ಕೊಟ್ಟೂರು (ವಿಜಯನಗರ): ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣ ಎದುರಿನ ರಸ್ತೆಯಲ್ಲಿ ಬೃಹತ್ ಗುಂಡಿ ಬಿದ್ದು ಮಳೆನೀರು ತುಂಬಿಕೊಂಡಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಜೀವಾಪಾಯದಲ್ಲೇ ಸಂಚರಿಸುವಂತಾಗಿದೆ. ಅಪಘಾತ ಸಂಭವಿಸುವ ಮುನ್ನವೇ ರಸ್ತೆ ದುರಸ್ತಿ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರತಿದಿನ ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಲಾರಿಗಳು ಮತ್ತು ಇತರ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ನೀರು ತುಂಬಿರುವ ಕಾರಣ ಗುಂಡಿಯ ಆಳ ಅರಿಯಲಾಗದೆ ವಾಹನಗಳು ಸಿಲುಕಿಕೊಳ್ಳುವ ಘಟನೆಗಳು ನಡೆಯುತ್ತಿವೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವೇಗವಾಗಿ ಸಂಚರಿಸುವ ಬಸ್ ಮತ್ತು ಲಾರಿಗಳು ಗುಂಡಿಯಲ್ಲಿರುವ ನೀರನ್ನು ಪಾದಚಾರಿಗಳ ಮೇಲೆ ಚಿಮ್ಮಿಸುತ್ತಿದ್ದು, ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಯಾಗದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ದುರವಸ್ಥೆಯನ್ನು ಕಂಡು ಸ್ಥಳೀಯ ಸಾರ್ವಜನಿಕರೊಬ್ಬರು, “ಕಂಡು ಕಾಣದ ಗುಂಡಿ, ಇದರ ಮೇಲೆ ಆರು ಚಕ್ರದ ಬಂಡಿ!” ಎಂದು ವ್ಯಂಗ್ಯವಾಗಿ ಕವನ ಗುನುಗುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.

ಕೊಟ್ಟೂರು ಬಸ್ ನಿಲ್ದಾಣದಂತಹ ಪ್ರಮುಖ ಸ್ಥಳದಲ್ಲೇ ರಸ್ತೆ ಹಾಳಾಗಿದ್ದರೂ ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಪಘಾತ ಸಂಭವಿಸುವ ಮುನ್ನವೇ ಅಪಾಯಕಾರಿ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News