Vijayanagara | ಸ್ಥಳೀಯ ಟಿಪ್ಪರ್ ಲಾರಿಗಳಿಗೆ ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ
ಹೊಸಪೇಟೆ/ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಸ್ಥಳೀಯ ಲಾರಿ ಮಾಲೀಕರು ಹಾಗೂ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ, ಲಾರಿ ಮಾಲೀಕರ ಹಿತರಕ್ಷಣಾ ಸಂಘದ ವತಿಯಿಂದ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಸಕ್ಕುಬಾಯಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೀನರ್ ಸ್ಟೀಲ್ & ಪವರ್ ಪ್ರೈವೇಟ್ ಲಿಮಿಟೆಡ್ ಮೈನ್ಸ್ ವತಿಯಿಂದ ಹೊರರಾಜ್ಯಗಳಿಗೆ ಸಿವಿಲ್ ಲಾರಿಗಳ ಮೂಲಕ ಕಬ್ಬಿಣದ ಅದಿರು ಸಾಗಿಸಲು ಕೈಗೊಂಡಿರುವ ನಿರ್ಧಾರವನ್ನು ಪ್ರತಿಭಟನಾಕಾರರು ತೀವ್ರವಾಗಿ ವಿರೋಧಿಸಿದರು. ಈ ಕ್ರಮದಿಂದ ಸ್ಥಳೀಯ ಟಿಪ್ಪರ್ ಲಾರಿ ಮಾಲೀಕರು, ಚಾಲಕರು ಹಾಗೂ ಕ್ಲೀನರ್‌ಗಳ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಹಾಯಕ ಆಯುಕ್ತ, ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸ್ಥಳೀಯರ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿದರು.
ಮನವಿಯಲ್ಲಿ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಹಾಗೂ ರಾಜಾಪುರ ಗ್ರಾಮಗಳ 250ಕ್ಕೂ ಹೆಚ್ಚು ಟಿಪ್ಪರ್ ಲಾರಿ ಮಾಲೀಕರು, ಚಾಲಕರು ಮತ್ತು ಕ್ಲೀನರ್‌ಗಳು ಇದೇ ಗಣಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಸಿವಿಲ್ ಲಾರಿಗಳ ಮೂಲಕ ಅದಿರು ಸಾಗಣೆ ಆರಂಭವಾದರೆ ಸ್ಥಳೀಯರಿಗೆ ಉದ್ಯೋಗ ಕಳೆದುಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿವರಿಸಲಾಗಿದೆ.
ಗಣಿ ಆರಂಭವಾದ ಸಂದರ್ಭದಲ್ಲಿ ಸ್ಥಳೀಯ ಲಾರಿಗಳಿಗೆ ನಿರಂತರವಾಗಿ ಕೆಲಸ ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದರೆ ಕೇವಲ ಒಂದು ವರ್ಷ ಮಾತ್ರ ಸ್ಥಳೀಯರಿಗೆ ಕೆಲಸ ನೀಡಿ, ಬಳಿಕ ಕಂಪನಿಯ ಸ್ವಂತ ಲಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಸಂಘ ಆರೋಪಿಸಿದೆ.
ಸುಮಾರು 50 ವರ್ಷಗಳ ಗುತ್ತಿಗೆ ಅವಧಿ ಇರುವ ಹಿನ್ನೆಲೆಯಲ್ಲಿ ನಿರಂತರ ಉದ್ಯೋಗ ದೊರೆಯಲಿದೆ ಎಂಬ ನಿರೀಕ್ಷೆಯಿಂದ ಸ್ಥಳೀಯರು ಸಾಲ ಮಾಡಿ ಟಿಪ್ಪರ್ ಲಾರಿಗಳನ್ನು ಖರೀದಿಸಿದ್ದು, ಅದೇ ಆದಾಯದಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈಗ ಉದ್ಯೋಗ ಕಳೆದುಕೊಂಡರೆ ಮತ್ತೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೊರರಾಜ್ಯಗಳಿಗೆ ಅದಿರು ಸಾಗಿಸುವ ಅಗತ್ಯವಿದ್ದರೆ ಹತ್ತಿರದ ರೈಲ್ವೆ ಯಾರ್ಡ್ ಮೂಲಕ ಸಾಗಣೆ ವ್ಯವಸ್ಥೆ ಮಾಡಬೇಕು. ಗಣಿಯಿಂದ ರೈಲ್ವೆ ಯಾರ್ಡ್‌ವರೆಗೆ ಸ್ಥಳೀಯ ಟಿಪ್ಪರ್ ಲಾರಿಗಳಿಗೆ ಮಾತ್ರ ಸಾಗಣೆ ಅವಕಾಶ ಕಲ್ಪಿಸಬೇಕು ಎಂದು ಸಂಘ ಆಗ್ರಹಿಸಿದೆ.
ಸಿವಿಲ್ ಲಾರಿಗಳ ಮೂಲಕ ಅದಿರು ಸಾಗಣೆಗೆ ಅನುಮತಿ ನೀಡಿದರೆ ಗ್ರಾಮದಲ್ಲಿನ ಲಾರಿ ಮಾಲೀಕರು, ಚಾಲಕರು ಹಾಗೂ ಕ್ಲೀನರ್‌ಗಳು ಕುಟುಂಬ ಸಮೇತ ರಸ್ತೆ ತಡೆ ಹಾಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್, ಓಬಯ್ಯ ನಾಯ್ಕ್, ಸೋಮು ನಾಯ್ಕ್, ರೆಡ್ಡಿ, ಜಂಬಯ್ಯ, ಸುರೇಶ್, ಸೂರ್ಯ ನಾಯ್ಕ್, ಲಕ್ಷ್ಮಣ, ಹನುಮಂತ, ರಾಜಪ್ಪ, ವೆಂಕಟೇಶ್ ಸೇರಿದಂತೆ ಅನೇಕ ಲಾರಿ ಮಾಲೀಕರು, ಚಾಲಕರು, ಕ್ಲೀನರ್‌ಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.