ವಿಜಯನಗರ : ಜಿಲ್ಲೆಯಾದ್ಯಂತ ಆ. 17 ರವರೆಗೆ ʼಹರ್ ಘರ್ ತಿರಂಗಾʼ ಅಭಿಯಾನ
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ(ಹೊಸಪೇಟೆ): ಪ್ರಸಕ್ತ ಸಾಲಿನ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಆ. 17 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ʼಆಜಾದಿ ಕಾ ಅಮೃತ ಮಹೋತ್ಸವʼದ ಭಾಗವಾಗಿ ಕೇಂದ್ರ ಸರ್ಕಾರವು ಆರಂಭಿಸಿರುವ ಈ ಅಭಿಯಾನವು ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರೋತ್ಸಾಹಿಸುವುದು ಮತ್ತು ತ್ರಿವರ್ಣ ಧ್ವಜದೊಂದಿಗೆ ವೈಯಕ್ತಿಕ ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ತಿರಂಗಾ ರ್ಯಾಲಿಗಳು, ಸೈಕಲ್ ಮತ್ತು ಬೈಕ್ ಜಾಥಾಗಳನ್ನು ಆಯೋಜಿಸುವುದು. ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸಾರ್ವಜನಿಕ ಸ್ಥಳ, ಅಂಗಡಿ, ಮಾಲ್, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು, ಸೇತುವೆಗಳು ಹಾಗೂ ಶಾಲೆ-ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಸಿ ದೀಪಾಲಂಕಾರ ಮಾಡುವುದು. ಸಾರ್ವಜನಿಕ ವೃತ್ತಗಳು ಹಾಗೂ ಕಾಲುದಾರಿಗಳಲ್ಲಿ ತಿರಂಗಾ ಆಧಾರಿತ ರಂಗೋಲಿಗಳನ್ನು ಬಿಡಿಸುವುದು. ಜೊತೆಗೆ ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರಗೀತೆ, ತ್ರಿವರ್ಣ ಧ್ವಜ ಆಧಾರಿತ ಚಿತ್ರಕಲೆ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.