Hosapete | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ
ಹೊಸಪೇಟೆ : ನೀಟ್ ಯುಜಿ (NEET UG) 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರಿಹಾರ ನೀಡಬೇಕು ಹಾಗೂ ಎನ್‌ಟಿಎ ಸಂಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕು ದಂಡಾಧಿಕಾರಿ ಶ್ರುತಿ ಅವರ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ, ದೇಶದಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ NEET UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿರುವ ಹಿನ್ನೆಲೆ ಎನ್‌ಟಿಎ ಮರುಪರೀಕ್ಷೆ ಘೋಷಿಸಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಆರಂಭದಿಂದಲೂ ಪರೀಕ್ಷಾ ಅಕ್ರಮಗಳಿಗೆ ಕುಖ್ಯಾತವಾಗಿರುವ ಎನ್‌ಟಿಎ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ಸಾಬೀತುಪಡಿಸಿದೆ. ಈ ಹಿಂದೆ ನಡೆದ ಅಕ್ರಮಗಳ ಮೇಲೂ ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಹೀಗಾಗಿ ಎನ್‌ಟಿಎ ಸಂಸ್ಥೆಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಡಾ. ದೊಡ್ಡ ಬಸವರಾಜ್ ಗುಳೇದಳ್ ಮಾತನಾಡಿ, ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೋರಿಕೆಯಾಗಿವೆ ಎಂಬ ವರದಿಗಳು ಆತಂಕಕಾರಿ ಎಂದರು.
180 ಪ್ರಶ್ನೆಗಳ ಪೈಕಿ ಸುಮಾರು 15 ಪ್ರಶ್ನೆಗಳು ಮುಂಚಿತವಾಗಿಯೇ ಪ್ರಸಾರವಾಗಿದ್ದರೆ, ರಸಾಯನಶಾಸ್ತ್ರ ವಿಭಾಗದ ಸುಮಾರು 120 ಪ್ರಶ್ನೆಗಳು ಅಕ್ಷರಶಃ ಸೋರಿಕೆಯಾಗಿರುವುದು ಗಂಭೀರ ವಿಷಯವಾಗಿದೆ ಎಂದು ಹೇಳಿದರು.
ಎಸ್‌ಎಫ್‌ಐ ರಾಜ್ಯ ಪದಾಧಿಕಾರಿ ಅನಂತರಾಜ್ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರದ ಕೇಂದ್ರೀಕೃತ ಪರೀಕ್ಷಾ ನೀತಿಗಳೇ ಕಾರಣ ಎಂದು ಆರೋಪಿಸಿದರು.
ಪರೀಕ್ಷಾ ವ್ಯವಸ್ಥೆಯನ್ನು ಕೇಂದ್ರೀಕರಿಸುವ ಮೂಲಕ ಸರ್ಕಾರ ಪರೀಕ್ಷಾ ಮಾಫಿಯಾಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಆತಂಕ ಮತ್ತು ಅನಿಶ್ಚಿತತೆಯಲ್ಲಿ ಬದುಕುವಂತಾಗಿದೆ. ಜೊತೆಗೆ ಕೋಚಿಂಗ್ ಮಾಫಿಯಾಗಳು ಬೆಳೆಯಲು ಸಹ ಕಾರಣವಾಗಿದೆ ಎಂದು ಟೀಕಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಂಟಾದ ಹಾನಿಗೆ ಎನ್‌ಟಿಎ ಪರಿಹಾರ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಎನ್‌ಟಿಎ ಸಂಸ್ಥೆಯನ್ನು ರದ್ದುಪಡಿಸಬೇಕು ಎಂದು ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಸಮಿತಿ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಪದಾಧಿಕಾರಿಗಳಾದ ಪವನ್ ಕುಮಾರ್ ಸೇರಿದಂತೆ ಹಲವು ವಿದ್ಯಾರ್ಥಿ ಮುಖಂಡರು ಭಾಗವಹಿಸಿದ್ದರು.