ಕೂಡ್ಲಿಗಿ | ಮಣ್ಣಿನ ಫಲವತ್ತತೆ ಕಾಪಾಡುವುದರಲ್ಲೇ ಕೃಷಿಯ ನೈಜ ಯಶಸ್ಸು: ಘಂಟಿ ರಾಘವೇಂದ್ರ ಶೆಟ್ಟಿ
ಕೂಡ್ಲಿಗಿ: ರೈತರು ಬೆಳೆ ಬೆಳೆಯುವುದಕ್ಕೆ ಮಾತ್ರ ಆದ್ಯತೆ ನೀಡದೆ, ಮಣ್ಣಿನ ಜೀವಂತಿಕೆ ಮತ್ತು ಫಲವತ್ತತೆಯನ್ನು ಕಾಪಾಡಬೇಕು. ಮಣ್ಣಿನ ಆರೋಗ್ಯವನ್ನು ಉಳಿಸಿ ಬೆಳೆಸುವುದರಲ್ಲಿಯೇ ಕೃಷಿಯ ನೈಜ ಯಶಸ್ಸು ಅಡಗಿದೆ ಎಂದು ಸಾವಯವ ಕೃಷಿಕ ಘಂಟಿ ರಾಘವೇಂದ್ರ ಶೆಟ್ಟಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಆಯೋಜಿಸಿದ್ದ ‘ಹಸಿರಿನೊಂದಿಗೆ ಮಾತುಕತೆ’ ಕಾರ್ಯಕ್ರಮದ 20ನೇ ಸರಣಿಗೆ ಆತಿಥ್ಯ ವಹಿಸಿ ಅವರು ಮಾತನಾಡಿದರು.
ಸಾವಯವ, ನೈಸರ್ಗಿಕ ಹಾಗೂ ಸಹಜ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಸತ್ವವನ್ನು ಹೆಚ್ಚಿಸಬಹುದು. ಕೃಷಿ ತ್ಯಾಜ್ಯವನ್ನು ಮಣ್ಣಿನ ಹೊದಿಕೆಯಾಗಿ ಬಳಸುವುದು, ಬೆಳೆ ವೈವಿಧ್ಯತೆಯನ್ನು ಕಾಪಾಡುವುದು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ಕಾರ್ಯಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿ, ರೈತರು ತಮ್ಮ ಕೃಷಿ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಹಸಿರಿನೊಂದಿಗೆ ಮಾತುಕತೆ’ ಕಾರ್ಯಕ್ರಮ ಮುಕ್ತ ವೇದಿಕೆಯಾಗಿದೆ ಎಂದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಪಿ.ಆರ್. ಬದರಿಪ್ರಸಾದ್ ಅವರು ರೈತರಿಗೆ ಪ್ರತಿ ತಿಂಗಳು ‘ಒಡಲಾಳ’ ಕಾರ್ಯಕ್ರಮದ ಮೂಲಕ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು. ಎಚ್.ವಿ. ಸಜ್ಜನ್ ಅವರು ಜಮೀನಿನಲ್ಲಿ ಕೈಗೊಂಡಿರುವ ಕೃಷಿ ಪ್ರಯೋಗಗಳನ್ನು ಶ್ಲಾಘಿಸಿದರು. ಜಬೀವುಲ್ಲಾ ಅವರು ಬಿದಿರು ಕೃಷಿ ಹಾಗೂ ಮೌಲ್ಯವರ್ಧನೆ ಕುರಿತು ಮಾತನಾಡಿದರೆ, ಶಶಿಧರ ಗುರೂಜಿ ಕೃಷಿ ಕ್ಷೇತ್ರದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ವಿಜಯಪುರ ಹಾಗೂ ದಾವಣಗೆರೆ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.