ಸಾಂದರ್ಭಿಕ ಚಿತ್ರ (AI)

ಹೊಸಪೇಟೆ/ ವಿಜಯನಗರ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಪಂಪಾಪತಿ ನಾಯ್ಕಟಿ ಅಲಿಯಾಸ್ ಪಂಪಾಪತಿ ಟಿ. ಅವರಿಗೆ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 6 ಲಕ್ಷ ರೂ. ದಂಡ ವಿಧಿಸಿದೆ.

2014ರಲ್ಲಿ ಟಿಪ್ಪರ್ ಲಾರಿಯ ಪರವಾನಗಿ ನಕಲಿಯಾಗಿದೆ ಎಂದು ಹೇಳಿ ₹1,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ, ಪಿರ್ಯಾದಿದಾರರ ಮೊಬೈಲ್ ಕಸಿದುಕೊಂಡು ವಾಪಸ್ ನೀಡಲು ₹600 ಲಂಚ ಕೇಳಿದ್ದರು. 23-07-2014ರಂದು ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 12 ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ ಎಂದು ಕರ್ನಾಟಕ ಲೋಕಾಯುಕ್ತದ ಬಳ್ಳಾರಿ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor